ಶಿವಮೊಗ್ಗ: ಶರಾವತಿ (Sharavathi) ಹಿನ್ನೀರು ಭಾಗದ ಜನರ 60 ವರ್ಷದ ಕನಸು ನನಸಾಗಿದೆ. ದೇಶದ ಎರಡನೇ ಅತಿ ಉದ್ದದ ಕೇಬಲ್ ಸೇತುವೆ ಸಿಗಂದೂರು ಬ್ರಿಡ್ಜ್ (Sigandur Bridge) ಕಾಮಗಾರಿ ಪೂರ್ಣವಾಗಿದ್ದು ಇಂದು ಲೋಕಾರ್ಪಣೆಯಾಗಲಿದೆ. 2019ರಲ್ಲಿ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರೇ ಈ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ನಾಗ್ಪುರದಿಂದ ವಿಶೇಷ ವಿಮಾನದ ಮೂಲಕ ಬೆಳಗ್ಗೆ 10:45ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shivamogga) ಗಡ್ಕರಿ ಬರಲಿದ್ದಾರೆ. ಬಳಿಕ ಹೆಲಿಕಾಪ್ಟರ್‌ನಲ್ಲಿ ಸಾಗರದ ಮಂಕಳಲೆ ಹೆಲಿಪ್ಯಾಡಿಗೆ ಬಂಧು ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಸಿಗಂದೂರು ಸೇತುವೆ ಬಳಿ ಬರಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಐತಿಹಾಸಿಕ ಸೇತುವೆ ಉದ್ಘಾಟನೆಯಾಗಲಿದ್ದು ಬಳಿಕ 12:40ಕ್ಕೆ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸಾಗರದ ನೆಹರೂ ಮೈದಾನದಲ್ಲಿ ಸಭಾ ಕಾರ್ಯಕ್ರಮದಲ್ಲಿ ಗಡ್ಕರಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಸೇತುವೆ ಲೋಕಾರ್ಪಣೆ ಜೊತೆಗೆ ರಾಜ್ಯದ 2,056 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ನಿತಿನ್ ಗಡ್ಕರಿ ಚಾಲನೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಬಳಿಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ಗಡ್ಕರಿ ಪ್ರಯಾಣ ಬೆಳೆಸಲಿದ್ದಾರೆ.
ಸೇತುವೆಯ ವಿಶೇಷತೆ ಏನು?
470 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದ್ದು 2.25 ಕಿ.ಮೀ. ಉದ್ದವಿದೆ. 16 ಮೀಟರ್ ಅಗಲ ಹೊಂದಿದ್ದು ಸೇತುವೆಯ ಎರಡು ಬದಿ ಫುಟ್‌ಪಾತ್ ನಿರ್ಮಾಣವಾಗಿದೆ. ಮಧ್ಯ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಸಿಗಲಿದೆ. ಸಿಗಂದೂರು, ಕೊಲ್ಲೂರು ಕ್ಷೇತ್ರಗಳಿಗೆ ಅನುಕೂಲವಾಗಲಿದೆ.