– ಹೊಸ ರಸ್ತೆಗಳಿಂದ ಶಿವಮೊಗ್ಗದಲ್ಲಿ ಸಮಗ್ರ ಅಭಿವೃದ್ಧಿ ಎಂದ ಕೇಂದ್ರ ಸಚಿವ
ಶಿವಮೊಗ್ಗ: 7 ಜಿಲ್ಲೆಗಳಿಗೆ ಸಂಬಂಧಿಸಿದ 6,200 ಕೋಟಿ ರೂ. ಮೊತ್ತದ ಒಟ್ಟು 300 ಕಿ.ಮೀ ಉದ್ದದ 18 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದು ಶಂಕುಸ್ಥಾಪನೆ ನೆರವೇರಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಭಾರತ ಸರ್ಕಾರ ಹಾಗೂ ಪಿಡಬ್ಲ್ಯೂಡಿ ಇಲಾಖೆ ಶಿವಮೊಗ್ಗ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ವಿವಿಧ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು. 7 ಜಿಲ್ಲೆಗಳಿಗೆ ಸಂಬಂಧಿಸಿದ 6,200 ಕೋಟಿ ರೂ. ಮೊತ್ತದ 300 ಕಿ.ಮೀ ಉದ್ದದ ಒಟ್ಟು 18 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಹಾಗೂ 2,138.30 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.
Advertisement
Advertisement
ಬಳಿಕ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪ್ರಗತಿಶೀಲ, ಸಮೃದ್ಧ ರಾಜ್ಯವಾಗಿದ್ದು, ಸ್ವಾಭಾವಿಕ ಸಂಪತ್ತಿನಿಂದ ಹಿಡಿದು ಐಟಿ ವಲಯದವರೆಗೆ ವಿಕಾಸ ಹೊಂದುತ್ತಿದೆ. ಈ ವಿಕಾಸದ ವೇಗ ಹೆಚ್ಚಿದಷ್ಟು ದೇಶದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ. ನಮ್ಮ ರಾಷ್ಟ್ರವು 3ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಬೇಕೆಂಬುದು ನಮ್ಮ ಪ್ರಧಾನಿಯವರ ಕನಸಾಗಿದ್ದು ಆತ್ಮ ನಿರ್ಭರ ಭಾರತ ನಮ್ಮೆಲ್ಲರ ಗುರಿಯಾಗಬೇಕು ಎಂದು ಕರೆ ನೀಡಿದರು.
Advertisement
ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಗೆ ಅವಶ್ಯಕವಾದ ಕೆಲಸಗಳ ಕುರಿತು ನಿರಂತರವಾಗಿ ತಮ್ಮ ಸಂಪರ್ಕದಲ್ಲಿದ್ದು ಕಾಮಗಾರಿಗಳನ್ನು ತಂದಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸ ರಸ್ತೆಗಳಿಂದ ವ್ಯಾಪಾರ, ಕೈಗಾರಿಕೆ ಸೇರಿದಂತೆ ಸಮಗ್ರ ಅಭಿವೃದ್ಧಿ ಆಗಲಿದೆ. ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಲು ಹಾಗೂ ಹೊಸ ರಸ್ತೆ, ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದ್ದು ಭೂ ಸ್ವಾಧೀನ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆದು ವೇಗದಲ್ಲಿ ಕೆಲಸಗಳು ಆಗಬೇಕು ಎಂದು ಹೇಳಿದರು.
Advertisement
ಸಾಗರ-ಮರಕುಟುಕವರೆಗೆ ರಸ್ತೆ ಅಗಲೀಕರಣಕ್ಕೆ ಮಂಜೂರಾತಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 169-ಎನ ಆಗುಂಬೆಯಲ್ಲಿ ಟನಲ್ ನಿರ್ಮಾಣಕ್ಕೆ ಕೋರಿದ್ದು ಇದನ್ನು ಪರಿಶೀಲಿಸಿ ಮಂಜೂರಾತಿ ನೀಡಲಾಗುವುದು. 3 ಕಡೆ ಹೈಮಾಸ್ಟ್ ಲೈಟ್‍ಗಳನ್ನು ನಿರ್ಮಾಣ ಮಾಡುವುದಕ್ಕೂ ಆದೇಶ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಬೆಂಗಳೂರು ಸಂಚಾರ ದಟ್ಟಣೆ ಕಡಿಮೆಗೊಳಿಸಲು 17 ಸಾವಿರ ಕೋಟಿ ವೆಚ್ಚದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಜನವರಿ 2025ರ ವೇಳೆಗೆ 6 ಪ್ಯಾಕೆಜ್‌ಗಳ ರಿಂಗ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಕರ್ನಾಟಕದ ಬಂದರುಗಳು ಅಭಿವೃದ್ಧಿಗೊಂಡರೇ ರಾಜ್ಯದ ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು. ರಾಜ್ಯದ ಒಟ್ಟಾರೆ ಪ್ರಗತಿಯಲ್ಲಿ ರಸ್ತೆಗಳ ಪಾತ್ರ ಪ್ರಮುಖವಾಗಲಿದೆ ಎಂದರು.
ಇನ್ನೂ ಲೋಕೋಪಯೋಗಿ ಇಲಾಖೆ ಕಳುಹಿಸಿದ 17 ಪ್ರಮುಖ ಯೋಜನೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆದಷ್ಟು ಬೇಗನೇ ಇವುಗಳಿಗೆ ಅಗತ್ಯ ಮಂಜೂರಾತಿ ನೀಡಲಾಗುತ್ತದೆ. ಸಿಆರ್‌ಎಫ್ ಅಡಿ 2,000 ಕೋಟಿ ವೆಚ್ಚದ ಕಾಮಗಾರಿಗಳನ್ನು ಕರ್ನಾಟಕ ರಾಜ್ಯಕ್ಕೆ ಮಂಜೂರು ಮಾಡಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹೆದ್ದಾರಿ ಜಾಲವನ್ನು ಜೋಡಿಸುವ ಮೂಲಕ ಒಟ್ಟಾರೆ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವುದರ ಜೊತೆಗೆ ಅಭಿವೃದ್ಧಿಗೆ ಪೂರಕವಾದ ವಾತಾವರಣ ಲಭಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಶಯ ವ್ಯಕ್ತಪಡಿಸಿದರು.
ಪೆಟ್ರೋಲ್, ಡೀಸೆಲ್ ಬೆಲೆಗೆ ಹೋಲಿಸಿದರೆ ಎಥೆನಾಲ್ ಕಡಿಮೆ ದರದಲ್ಲಿ ದೊರೆಯುತ್ತದೆ. ಎಥೆನಾಲ್, ಗ್ರೀನ್ ಹೈಡ್ರೋಜನ್, ಎಲೆಕ್ಟ್ರಿಕಲ್ ವಾಹನಗಳು ಸೇರಿದಂತೆ ಜೈವಿಕ ಇಂಧನ ನಮ್ಮ ಮುಂದಿನ ಭವಿಷ್ಯವಾಗಿದೆ. ಜಿಲ್ಲೆಯಲ್ಲಿ ಎಥೆನಾಲ್ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚು ಅವಕಾಶಗಳಿವೆ. ಸಕ್ಕರೆ ಕಾರ್ಖಾನೆಗಳಿವೆ ಇದರಿಂದ ಸಹ ಉತ್ಪಾದಿಸಬಹುದು. ಎಥೆನಾಲ್ ನಿಂದ ವಿಮಾನ ಇಂಧನ ಸಹ ತಯಾರಾಗುತ್ತಿದ್ದು ರೈತರ ಅಭಿವೃದ್ಧಿ ಮತ್ತು ಪರಿಸರ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಎಥೆನಾಲ್ ಬಳಕೆಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡಬೇಕು. ಇದರಿಂದ ರಾಜ್ಯವನ್ನು ಜೈವಿಕ ಇಂಧನ ಉತ್ಪಾದಕ ಹಬ್ ಆಗಿ ಮಾಡಬಹುದು ಎಂದು ಸಲಹೆ ನೀಢಿದರು.
ನಿತಿನ್ ಗಡ್ಕರಿ, ಶಿವಮೊಗ್ಗ, ರಾಷ್ಟ್ರೀಯ ಹೆದ್ದಾರಿ