ನ್ಯೂಯಾರ್ಕ್ ಮ್ಯೂಸಿಯಂಗೆ ಟ್ರಸ್ಟಿಯಾದ ನೀತಾ ಅಂಬಾನಿ

Public TV
1 Min Read
nita ambani 1

ನ್ಯೂಯಾರ್ಕ್: ಶಿಕ್ಷಣ ತಜ್ಞೆ ಹಾಗೂ ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರನ್ನು ಅಮೆರಿಕದ ಬಹುದೊಡ್ಡ ಕಲಾಕೇಂದ್ರವಾಗಿರುವ ನ್ಯೂಯಾರ್ಕ್ ಮೆಟ್ರೊಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್​ಗೆ ಟ್ರಸ್ಟಿಯಾಗಿ ಆಯ್ಕೆ ಮಾಡಲಾಗಿದೆ.

ಮಂಗಳವಾರ ನೀತಾ ಅಂಬಾನಿ ಅವರನ್ನು ಗೌರವಾನ್ವಿತ ಟ್ರಸ್ಟಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮ್ಯೂಸಿಯಂನ ಅಧ್ಯಕ್ಷ ಡೇನಿಯನ್ ಬ್ರಾಡ್ಸ್ಕಿ ಘೋಷಿಸಿದ್ದಾರೆ. ನೀತಾ ಅಂಬಾನಿ ಅವರು ಈ ಸ್ಥಾನಕ್ಕೆ ಆಯ್ಕೆ ಆದ ಮೊದಲ ಭಾರತೀಯ ಮಹಿಳೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ.

nita ambani 1 1

ಮೆಟ್ರೊಪಾಲಿಟನ್ ಕಲಾ ವಸ್ತು ಸಂಗ್ರಹಾಲಯದ ಮೇಲೆ ನೀತಾ ಅಂಬಾನಿ ತೋರುತ್ತಿರುವ ಬದ್ಧತೆ, ಭಾರತದ ಕಲೆ, ಸಂಸ್ಕೃತಿಯನ್ನು ಬೆಳೆಸುವ ಬಗ್ಗೆ ಅವರಿಗಿರುವ ಕಾಳಜಿ ನಿಜಕ್ಕೂ ಅದ್ಭುತವಾದದ್ದು. ಅವರ ಬೆಂಬಲ ಕಾಳಜಿಯಿಂದ ಮ್ಯೂಸಿಯಂನಲ್ಲಿ ದೇಶದ ವಿವಿಧ ಮೂಲೆಮೂಲೆಗಳ ಕಲೆ, ಸಂಸ್ಕೃತಿಗಳನ್ನು ಅಧ್ಯಯನ ಮಾಡಿ, ಪ್ರದರ್ಶಿಸಲು ಸಹಾಯಕವಾಗಿದೆ. ಜೊತೆಗೆ ಅವರು ಭಾರತದಲ್ಲಿ ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ನಿಜಕ್ಕೂ ಮೆಚ್ಚುವಂತಹದ್ದು. ಅವರನ್ನು ಮ್ಯೂಸಿಯಂಗೆ ಟ್ರಸ್ಟಿಯಾಗಿ ಆಯ್ಕೆ ಮಾಡಿರುವುದು ನಿಜಕ್ಕೂ ಖುಷಿಯ ವಿಷಯವಾಗಿದೆ ಎಂದು ಡೇನಿಯಲ್ ಬ್ರಾಡ್ಸ್ಕಿ ನೀತಾ ಅವರನ್ನು ಹೊಗಳಿದ್ದಾರೆ.

nita ambani 2

ಈ ಮ್ಯೂಸಿಯಂ 149 ವರ್ಷಗಳ ಇತಿಹಾಸ ಹೊಂದಿದೆ. ಅಮೆರಿಕದ ನಾಗರಿಕರು, ಉದ್ಯಮಿಗಳು ಸೇರಿ ಇಲ್ಲಿನ ಜನರಿಗೆ ಕಲೆ ಮತ್ತು ಕಲಾ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಈ ಮ್ಯೂಸಿಯಂ ಸ್ಥಾಪನೆ ಮಾಡಲಾಗಿದೆ. ಇಲ್ಲಿ ಪ್ರಪಂಚದ ಹಲವು ಪ್ರದೇಶಗಳ 5 ಸಾವಿರಕ್ಕೂ ಹೆಚ್ಚು ವರ್ಷಗಳ ಪುರಾತನ ಕಲೆಗಳನ್ನು ಬಿಂಬಿಸುವ ಸಾವಿರಾರು ಕಲಾ ವಸ್ತುಗಳು ಇವೆ. ಈ ಮ್ಯೂಸಿಯಂ ಈಗ ಅಪರೂಪದ, ಪ್ರಾಚೀನ ಹಾಗೂ ಸುಂದರ ವಸ್ತುಗಳ ಖಜಾನೆಯಾಗಿದೆ.

nita ambani 3

ಈ ಹಿಂದೆ ನೀತಾ ಅಂಬಾನಿ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಸದಸ್ಯೆಯಾಗಿ ಆಯ್ಕೆ ಆಗಿದ್ದರು. ಈ ಮೂಲಕ ಈ ಸ್ಥಾನಕ್ಕೆ ಏರಿದ ಮೊದಲ ಭಾರತದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *