‘ಅತಿಕಾಯ’ ಸಿನಿಮಾದ ಮಾಸ್ ಲುಕ್‌ನಲ್ಲಿ ನಿರೂಪ್ ಭಂಡಾರಿ

Public TV
1 Min Read
Atikaya 2

ಚಾಕೋಲೆಟ್ ಬಾಯ್, ಲವರ್ ಬಾಯ್ ಗೆಟಪ್‌ನಲ್ಲಿ ಮಿಂಚುತ್ತಿದ್ದ ನಿರೂಪ್ ಭಂಡಾರಿ (Nirup Bhandari), ಇದೀಗ ಮಾಸ್  ಲುಕ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ರಕ್ತಸಿಕ್ತ ಮುಖ,  ಲಾಂಗ್ ಹಿಡಿದು ನಿರೂಪ್ ಕ್ಯಾಮೆರಾ ಎದುರಿಸಿದ್ದಾರೆ. ಇದು ಯಾವ ಚಿತ್ರಕ್ಕಾಗಿ ಅಂತೀರಾ? ನಿರೂಪ್ ‘ಅತಿಕಾಯ’ (Atikaya)ಎನ್ನುವ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಸಿಕ್ಕಾಪಟ್ಟೆ ರಗಡ್ ಆಗಿ ದರ್ಶನ ಕೊಡಲು ಸಜ್ಜಾಗಿದ್ದಾರೆ.

Atikaya 1

ಅಂದಹಾಗೆ ಅತಿಕಾಯ ಸಿನಿಮಾ ನಾಗರಾಜ್ ಪೀಣ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಹಿಂದೆ ಪದೇ ಪದೇ, ನಮಕ್‌ಹರಾಮ್ ಮೊದಲಾದ ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ, ಸಣ್ಣ ಗ್ಯಾಪ್‌ನ ಬಳಿಕ ‘ಅತಿಕಾಯ’ನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಾರಿ ಹೊಸ ರೀತಿಯ ಕಥೆ ಸಿದ್ಧಪಡಿಸಿಕೊಂಡು ಅಖಾಡಕ್ಕಿಳಿದಿರುವ ನಾಗರಾಜ್, ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿಸಿದ್ದಾರೆ. ಮತ್ತೊಂದು ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ ಚಿತ್ರತಂಡ.

Atikaya 3

ಈವರೆಗೂ ಬೆಂಗಳೂರಿನ ಜನಜಂಗುಳಿ ಪ್ರದೇಶಗಳಲ್ಲೇ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ನೈಜವಾಗಿ ಮೂಡಿಬರಬೇಕೆಂಬ ಕಾರಣದಿಂದ ರಿಯಲಿಸ್ಟಿಕ್ ಆಗಿಯೇ ಶೂಟ್ ಮಾಡಲಾಗಿದೆಯಂತೆ. ಇದೀಗ ಚಿತ್ರದ ಫಸ್ಟ್‌ಲುಕ್ (First Look) ಬಿಡುಗಡೆ ಮಾಡಲಾಗಿದ್ದು, ನಿರೂಪ್  ಮಾಸ್ ಗೆಟಪ್ ಅನಾವರಣಗೊಂಡಿದೆ. ನಿರೂಪ್ ಅವರ ಈ ಲುಕ್ ನೋಡಿ ಸಿನಿ ಅಭಿಮಾನಿಗಳು ಕೂಡ ಅಚರಚರಿಗೊಂಡಿದ್ದಾರೆ.

‘ಈ ಚಿತ್ರಕ್ಕಾಗಿ ನಿರೂಪ್ ಭಂಡಾರಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ವರ್ಕೌಟ್ ಮಾಡಿ ದೇಹ ದಂಡಿಸಿದ್ದಾರೆ. ಪಾತ್ರಕ್ಕಾಗಿ ಗೆಟಪ್ ಸಹ ಬದಲಾಯಿಸಿಕೊಂಡಿದ್ದಾರೆ. ಅವರು ಈವರೆಗೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ‘ಅತಿಕಾಯ’ ಮೂಲಕ ಎಂಟ್ರಿ ಕೊಡಲಿದ್ದಾರೆ ಎಂಬುದು ವಿಶೇಷ. ಡೈಲಾಗ್ ಡೆಲಿವರಿ ಕೂಡ ಭಿನ್ನವಾಗಿರಲಿದೆ. ಒಟ್ಟಾರೆ ಅವರು ಔಟ್ ಆಂಡ್ ಔಟ್ ಬದಲಾದ ರೂಪದಲ್ಲಿ ಕಾಣಸಿಗುತ್ತಾರೆ. ಸಿನಿಮಾ ಕೂಡ ತುಂಬಾ ರಗಡ್ ಆಗಿರಲಿದೆ’ ಎಂದು ವಿವರಿಸುತ್ತಾರೆ ನಿರ್ದೇಶಕ ನಾಗರಾಜ್ ಪೀಣ್ಯ. ಉದಯಲೀಲ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀನಿವಾಸ್ ಪಿ ಬಾಬು ಸಂಕಲನ, ಸತೀಶ್ ಆರ್ಯನ್ ಸಂಗೀತ ಸಂಯೋಜಿಸುತ್ತಿದ್ದಾರೆ.

Share This Article