ಬೆಂಗಳೂರು: ಅಡಿಕೆ ಮರಗಳಿಗೆ (Arecanut Crop) ಎಲೆ ಚುಕ್ಕಿರೋಗ ಹರಡುತ್ತಿದ್ದು, ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ (Government Of Karnataka) ಅವರ ನೆರವಿಗೆ ಧಾವಿಸಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಅವರು ಸಿಎಂ ಬೊಮ್ಮಾಯಿ (Basavaraj Bommai) ಅವರಿಗೆ ಮನವಿ ಮಾಡಿದ್ದಾರೆ.
Advertisement
ಶ್ರೀಗಳು ಬರೆದ ಪತ್ರದಲ್ಲಿ ಏನಿದೆ?
ಮಲೆನಾಡು ಪ್ರಾಂತ್ಯವಾದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ಅತಿಯಾದ ಮಳೆಯಾಗುತ್ತಿದೆ. ಇದರಿಂದ ಈ ಭಾಗದ ರೈತರ ಜೀವನಾಧಾರವಾಗಿರುವ ಅಡಿಕೆ, ಕಾಫಿ (Coffe), ಮೆಣಸು ಬೆಳೆಗಳು ಶೇ.90ರಷ್ಟು ಹಾನಿಗೊಳಗಾಗಿವೆ. ಅಡಿಕೆ ಮರಗಳಿಗೆ ದಶಕಗಳಿಂದಲೂ ಭಾದಿಸುತ್ತಿರುವ ಹಳದಿ ರೋಗದಿಂದ ಅಡಿಕೆ ಬೆಳೆ ಸಂಪೂರ್ಣ ನಾಶವಾಗಿ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.
Advertisement
Advertisement
ಈಗ ಅಡಿಕೆ ಮರಗಳಿಗೆ ಎಲೆಚುಕ್ಕಿ ರೋಗ ತುಂಬ ವೇಗವಾಗಿ ಹರಡುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಸಣ್ಣ ಹಿಡುವಳಿದಾರರು, ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಮಲೆನಾಡು ಕೃಷಿಕರಿಗೆ ಭವಿಷ್ಯದ ಬದುಕಿನ ಬಗ್ಗೆ ಹತಾಷ ಮನೋಭಾವ ಉಂಟಾಗಿದೆ.
Advertisement
ಅಡಿಕೆ ಬೆಳೆಯ ಮೇಲೆ ಅವಲಂಬಿತರಾಗಿರುವ ರೈತರ ಬದುಕು ಜರ್ಝರಿತವಾಗಿದ್ದು, ರೈತರು, ಕೃಷಿ ತಜ್ಞರು ಅಡಿಕೆ ಬೆಳೆರೋಗಗಳ ಸಂಶೋಧನಾಕಾರಿಗಳಿಂದ ಸಲಹೆ ಪಡೆದು ಅಡಿಕೆ ಮರಗಳಿಗೆ ರೋಗ ನಿರೋಧಕ ಔಷಧಗಳನ್ನು ಸಿಂಪಡಿಸುತ್ತಿದ್ದಾರೆ. ಆದರೂ ಈ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾನಿಕಾರಕ ಔಷಧಗಳಿಂದ ಪರಿಸರಕ್ಕೂ ಹಾನಿಯಾಗುವ ಆತಂಕ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮಲೆನಾಡಿನ ರೈತರ ಪರಿಸ್ಥಿತಿ ಅವಲೋಕಿಸಿ ಅಡಿಕೆ ಮರಗಳಿಗೆ ತಗುಲಿರುವ ರೋಗಗಳಿಗೆ ಸೂಕ್ತ ಔಷಧ ಒದಗಿಸಿಕೊಡಬೇಕು. ಅಡಿಕೆ ಬೆಳೆಗಾರರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು ಎಂದು ಮುಖ್ಯಮಂತ್ರಿಯವರಿಗೆ ಪತ್ರದಲ್ಲಿ ಕೋರಿದ್ದಾರೆ.