ಚಿಕ್ಕಬಳ್ಳಾಪುರ: ವಿಜೃಂಭಣೆಯಿಂದ ನೇರವೇರಿದ ಶ್ರೀ ವೀರಾಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಕಡಲೆಕಾಯಿ ಪರಿಷೆಗೆ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಶ್ರೀಗಳು ಭಕ್ತರಿಗೆ ಕಡಲೆಕಾಯಿ ವಿತರಿಸುವ ಮೂಲಕ ಚಾಲನೆ ನೀಡಿದರು.
ನಗರ ಹೊರವಲಯದ ಸೂಲಾಲಪ್ಪನದಿನ್ನೆ ಬಳಿಯ ಶ್ರೀ ಆದಿಚುಂಚನಗಿರಿ ಶಾಖಾಮಠ ಉಸ್ತುವಾರಿಯಲ್ಲಿರುವ ಶ್ರೀ ವಿರಾಂಜನೇಯ ಸ್ವಾಮಿ ದೇಗುಲದ ಬಳಿ ಜಾತ್ರಾ ಮಹೋತ್ಸವ ಹಾಗೂ ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನೇರವೇರಿತು. ಪ್ರತಿ ವರ್ಷ ನಡೆಯುವ ಈ ಜಾತ್ರಾ ಮಹೋತ್ಸವ ಹಾಗೂ ಕಡಲೆಕಾಯಿ ಪರಿಷೆಯಲ್ಲಿ ಶ್ರೀ ಗಳಿಂದ ಕಡಲೆಕಾಯಿ ಪಡೆಯಬೇಕೆಂಬುವುದು ಭಕ್ತರ ಅಭಿಲಾಷೆ. ಹೀಗಾಗಿ ಶ್ರೀ ನಿರ್ಮಲಾನಂದನಾಥ ಶ್ರೀಗಳಿಂದ ಕಡಲೆಕಾಯಿ ಪಡೆದುಕೊಳ್ಳೋಕೆ ಭಕ್ತರು ನಾ ಮುಂದು ತಾ ಮುಂದು ಅಂತ ಮುಗಿಬಿದ್ದು ಕಡಲೆಕಾಯಿ ಪಡೆದುಕೊಂಡರು.
Advertisement
Advertisement
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ವಿರಾಂಜನೇಯಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಇಡೀ ದೇವಾಲಯವನ್ನ ಹೂಗಳಿಂದ ಅಲಂಕಾರ ಮಾಡಿದ್ದು ಭಕ್ತರ ಕಣ್ಮನ ಸೆಳೆಯಿತು. ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು, ಆದಿಚುಂಚನಗಿರಿ ಶಾಖಾ ಮಠ ಹಾಗೂ ದೇವಾಲಯದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಭಕ್ತರಿಗೆ ಕಡಲೆಕಾಯಿ ಸೇರಿದಂತೆ ಪಾನಕ ಮಜ್ಜಿಗೆ ವಿತರಣೆ ಮಾಡಿದ್ದು ದೇವರ ದರ್ಶನ ಪಡೆದು ಪುನೀತರಾದ ಭಕ್ತರು ಶ್ರೀ ಗಳಿಂದ ಕಡಲೆಕಾಯಿ ಪಡೆದು ಸಂಭ್ರಮಿಸಿದರು.