ನವದೆಹಲಿ: ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ನಿರ್ಮಲಾ ಬಜೆಟ್ ಮಂಡನೆ ಮಾಡುವುದನ್ನು ನೋಡಲು ಅವರ ಪೋಷಕರು ಲೋಕಸಭೆಯ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದಾರೆ.
ಸಾವಿತ್ರಿ ಹಾಗೂ ನಾರಾಯಣನ್ ಸೀತಾರಾಮ್ ಅವರು ತಮ್ಮ ಮಗಳಿಗೆ ಆಶೀರ್ವಾದ ಹಾಗೂ ಪ್ರೋತ್ಸಾಹ ನೀಡಲು ತಮಿಳುನಾಡಿನಿಂದ ಆಗಮಿಸಿದ್ದರು. ನಿರ್ಮಲಾ ಸೀತಾರಾಮನ್ ಅವರ ತಂದೆ ನಾರಾಯಣನ್ ಅವರು ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಿ ಈಗ ನಿವೃತ್ತರಾಗಿದ್ದಾರೆ.
ನಿರ್ಮಲಾ ಸೀತರಾಮನ್ ಭಾರತದ ಪೂರ್ಣ ಅವಧಿಯ ಮೊದಲ ಮಹಿಳಾ ಹಣಕಾಸು ಮಂತ್ರಿಯಾಗಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಬಜೆಟ್ ಮಂಡನೆ ಶುರುವಾಗಿದೆ. ನಿರ್ಮಲಾ ಸೀತಾರಾಮನ್ ಅವರು ಸೂಟ್‍ಕೇಸ್ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಕೆಂಪು ಬಣ್ಣದ ಬಟ್ಟೆಯ ಒಳಗಡೆ ಬಜೆಟ್ ಪ್ರತಿಗಳನ್ನು ಇರಿಸಿಕೊಂಡು ಸಂಸತ್ ಪ್ರವೇಶಿಸಿದ್ದಾರೆ.
ಸಂಸತ್ ಪ್ರವೇಶಿಸುವ ಮುನ್ನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಸಚಿವೆ ಭೇಟಿಯಾಗಿದ್ದರು. ಬಜೆಟ್ ಮಂಡಿಸಿದ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಲಿದ್ದು, ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಆರ್ಥಿಕ ಸಲಹೆಗಾರ ಕೆ.ವಿ ಸುಬ್ರಮಣಿಯನ್ ಅವರು ಭಾಗಿಯಾಗಲಿದ್ದಾರೆ.