ಮತ್ತೊಂದು ಬಜೆಟ್ ಬಂದುಬಿಟ್ಟಿದೆ, ನಿರೀಕ್ಷೆಗಳ ಭಾರದೊಂದಿಗೆ. ಪ್ರಚಂಡ ಬಹುಮತದ ಸರ್ಕಾರ ಈ ವರ್ಷ ಏನು ಕೊಟ್ಟಿತ್ತು ಎಂಬ ಆಕಾಂಕ್ಷೆಗಳಿಗೆ ಮತ್ತೆ ರೆಕ್ಕೆಪುಕ್ಕ ಸಿಕ್ಕಿದೆ. ವೈಫಲ್ಯಗಳ ದಾಖಲೆಗಳ ಮೂಟೆಯೇ ಬೆನ್ನಿಗೆ ಅಂಟಿಕೊಂಡಿರುವ ಸಂದರ್ಭದಲ್ಲಿ ಫೆಬ್ರವರಿ 1ರಂದು ದೇಶದ ಮೊದಲ ಮಹಿಳಾ ಹಣಕಾಸು ಸಚಿವೆ ಎಂದು ಬಿರುದಾಕಿಂತ ನಿರ್ಮಲಾ ಸೀತಾರಾಮನ್ ತಮ್ಮ ಎರಡನೇ ಆಯವ್ಯಯವನ್ನು ಮಂಡಿಸಲಿದ್ದಾರೆ. ಪಿಯೂಷ್ ಬಜೆಟ್, ನಿರ್ಮಲಾ ಬಜೆಟ್ ಎನ್ನುವುದೇ ಇಲ್ಲ. ಏನಿದ್ದರೂ ಅದು ಮೋದಿ ಬಜೆಟ್, ಅದಷ್ಟೇ ಸತ್ಯ.
ಲೋಕಸಭಾ ಚುನಾವಣೆಯಲ್ಲಿ 303 ಸೀಟುಗಳನ್ನ ಗೆದ್ದು ಜನ ವಿಶ್ವಾಸ ಗಳಿಸಿರುವ ಪ್ರಧಾನಿ ಮೋದಿ ಸರ್ಕಾರದ ಬಜೆಟ್‍ಗೆ ಅಪನಂಬಿಕೆಯ ಕರಿನೆರಳು ಆವರಿಸಿದೆ. 2014ರಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದಾಗ ಜಿಡಿಪಿ ಲೆಕ್ಕಾಚಾರವನ್ನೇ ಬದಲಿಸಿ ದೇಶದ ಆರ್ಥಿಕ ಅಭಿವೃದ್ಧಿಯ ಅಂಕಿಯನ್ನು ಏರಿಸಿಕೊಂಡ ಸರ್ಕಾರ ಬಜೆಟ್‍ನಲ್ಲಿ ಹೇಳುತ್ತಿರುವುದೇ ಒಂದು, ಆಗುತ್ತಿರುವುದೇ ಮತ್ತೊಂದು. ಇರದದ್ದನ್ನೆಲ್ಲ ಹೀಗೆ ಇದೆ, ಇಷ್ಟೇ ಎಂದು ವರ್ಣಿಸಿ, ಬಣ್ಣಿಸಿ ಹೇಳಲಾಗುತ್ತಿದೆಯಷ್ಟೇ. ಆ ಚಾಣಾಕ್ಯತನ ಈ ಸರ್ಕಾರದ ಸರ್ವರಿಗೂ ಸಾಧಿತವಾಗಿದೆ.
Advertisement
Advertisement
2019ರಲ್ಲಿ ಮೋದಿ ಸರ್ಕಾರ ಎರಡು ಬಜೆಟ್‍ಗಳನ್ನು ಮಂಡಿಸಿತ್ತು. ಚುನಾವಣೆ ಬಳಿಕ ಜುಲೈ 5ರಂದು ಮಂಡಿಸಿದ್ದ ಪೂರ್ಣಪ್ರಮಾಣದ ಬಜೆಟ್. ಈ ಬಜೆಟ್‍ನಲ್ಲಿ ನಿರ್ಮಲಾ ಸಂಪ್ರದಾಯಿಕ ಸೂಟ್‍ಕೇಸ್‍ನ ಬದಲಾಗಿ ಕೆಂಬಣ್ಣದ ಬಟ್ಟೆಯಲ್ಲಿ ಬಜೆಟ್ ಪ್ರತಿಗಳನ್ನು ಕಟ್ಟಿ ತೆಗೆದುಕೊಂಡು ಹೋದರು. ಮೋದಿ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ಕೃಷ್ಣಮೂರ್ತಿ ಸುಬ್ರಮಣ್ಯಯನ್ `ಇದನ್ನು ಪಾಶ್ಚಿಮಾತ್ಯ ಯೋಚನೆಯ ದಾಸ್ಯದಿಂದ ದೂರವಾಗಿದ್ದು’ ಎಂದೇ ಬಣ್ಣಿಸಿದರು.
Advertisement
ನಿರ್ಮಲಾ ಆಯ್ಯವಯದಲ್ಲಿ 2019-2020ರ ಅವಧಿಯಲ್ಲಿ ವಿಶ್ವಗುರು ಭಾರತ ಶೇಕಡಾ 7ರ ದರದಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಅಂದಾಜಿಸಲಾಗಿತ್ತು. ಆರ್ಥಿಕ ವರ್ಷ ಅಂತ್ಯಗೊಳ್ಳುವುದಕ್ಕೆ ಇನ್ನೆರಡೇ ತಿಂಗಳಷ್ಟೇ ಬಾಕಿ. ಆದ್ರೆ ತ್ರೈಮಾಸಿಕ ಅವಧಿಗಳಲ್ಲಿ ಆರ್ಥಿಕತೆ ಪಾತಾಳಮುಖಿ ಆದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸ್ವತಃ ಸರ್ಕಾರವೇ ಮಾರ್ಚ್‍ಗೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಜಿಡಿಪಿ ಕೇವಲ 5ಕ್ಕೆ ಕುಸಿಯಬಹುದು ಎಂದು ಅಂದಾಜಿಸಿದೆ. ಅಂದರೆ ಬರೋಬ್ಬರೀ ಶೇಕಡಾ 2ರಷ್ಟು ವ್ಯತ್ಯಾಸ. ಐಎಎಫ್ ಅಂದಾಜಿನ ಪ್ರಕಾರ ಕೇವಲ ಶೇಕಡಾ 4.8.
Advertisement
ವಿತ್ತೀಯ ಕೊರತೆ. ಸರ್ಕಾರದ ಆದಾಯ ಮತ್ತು ಖರ್ಚಿನ ನಡುವಿನ ಅಂತರ. ಸರ್ಕಾರದ ಲೆಕ್ಕಾಚಾರದ ಪ್ರಕಾರ 2019-20ರ ಸಾಲಿನಲ್ಲಿ ವಿತ್ತೀಯ ಕೊರತೆ ಜಿಡಿಪಿಯ ಶೇಕಡಾ 3.4ರಷ್ಟು. ಆದರೆ ಮಹಾಲೆಕ್ಕಪರಿಶೋಧಕರ ಅನ್ವಯ ಶೇಕಡಾ 5.8ರಷ್ಟು, ಅಂದರೆ ಶೇಕಡಾ 2.4ರಷ್ಟು ಅಧಿಕ.
ಸರ್ಕಾರದ ಆದಾಯ ಗಳಿಕೆಯಲ್ಲಿ ನೇರ ಆದಾಯದ ಪಾಲು ದೊಡ್ಡದು. 2019ರ ಬಜೆಟ್‍ನಲ್ಲಿ ಶೇಕಡಾ 23.5ರ ದರದಲ್ಲಿ ಆದಾಯ ತೆರಿಗೆ ಸಂಗ್ರಹ ವರ್ಧಿಸಲಿದೆ ಎಂದು ಊಹಿಸಲಾಗಿತ್ತು. ಆದ್ರೆ ಬೆಳವಣಿಗೆ ಆಗಿದ್ದು ಮಾತ್ರ ಬರೀ ಶೇಕಡಾ 6.5ರಷ್ಟು. 10 ವರ್ಷಗಳಲ್ಲೇ ಮೊದಲ ಬಾರಿಗೆ ಆದಾಯ ತೆರಿಗೆ ಸಂಗ್ರಹ ಕುಸಿತಕ್ಕೆ ಸಾಕ್ಷಿ ಆಗಿದೆ ನವ ಭಾರತ. ಕಾಪೆÇೀರೇಟ್? ತೆರಿಗೆಯನ್ನು ಇಳಿಸಬೇಕೆಂದು ಆರಂಭದಲ್ಲೇ ಕೇಳಿಬಂದ ಕೂಗಿಗೆ ಕ್ಯಾರೇ ಎನ್ನದೇ ವಾದಿಸುತ್ತಲೇ ಇದ್ದ ಸರ್ಕಾರ ಎರಡೇ ತಿಂಗಳಲ್ಲಿ ಅಂದ್ರೆ ಸೆಪ್ಟೆಂಬರ್?ನಲ್ಲಿ ಆ ತೆರಿಗೆಯನ್ನು ಶೇಕಡಾ 10ರಷ್ಟು ಕಡಿತಗೊಳಿಸ್ತು. ಈ ಇಳಿಕೆಯೊಂದಿಗೆ ಒಂದೇ ಏಟಿಗೆ 1 ಲಕ್ಷದ 45 ಸಾವಿರ ಕೋಟಿ ರೂಪಾಯಿ ತೆರಿಗೆ ಬೊಕ್ಕಸಕ್ಕೆ ಖೋತಾ ಆಯಿತು. ಜಿಎಸ್‍ಟಿ ತೆರಿಗೆ ಸಂಗ್ರಹ 50 ಸಾವಿರ ಕೋಟಿ ರೂಪಾಯಿಯಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರಗಳ ಪಾಲಿನ ತೆರಿಗೆ ಕೊಡುವುದಕ್ಕೂ (ಪ್ರವಾಹ ಪೀಡಿತ ಕರ್ನಾಟಕವೂ ಸೇರಿದಂತೆ) ಮೋದಿ ಸರ್ಕಾರ ಪರದಾಡುತ್ತಿದೆ. ಅಲ್ಲಿಗೆ ಬಜೆಟ್‍ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ ಸಂಖ್ಯೆಗೆ ಹೋಲಿಸಿದರೆ ಬರೋಬ್ಬರೀ 3 ಲಕ್ಷ ಕೋಟಿ ರೂಪಾಯಿಯಷ್ಟು ಆದಾಯ ಖೋತಾ ಆಗುವುದು ನಿಶ್ಚಿತ.
56 ಇಂಚಿನ ಎದೆಯ ಪ್ರಧಾನಿ ಮೋದಿ ಸರ್ಕಾರಕ್ಕೆ ಕಹಿಸತ್ಯಗಳನ್ನು ಒಪ್ಪಿಕೊಳ್ಳುವ ಜಾಯಮಾನವೇ ಇಲ್ಲ. ಲೋಕಸಭಾ ಚುನಾವಣೆಗೂ ಮೊದಲೇ `ಭಾರತದಲ್ಲಿ ನಿರುದ್ಯೋಗ 42 ವರ್ಷಗಳ ಬಳಿಕ ಅತ್ಯಧಿಕವಾಗಿದೆ’ ಎಂದು ವರದಿ ಆಗಿತ್ತು. ಆದ್ರೆ ಚುನಾವಣಾ ಪ್ರಚಾರದಲ್ಲೇ ಆ ವರದಿಯನ್ನು ಸುಳ್ಳೆಂದು ಹೇಳಿಕೊಂಡೇ ಬಂದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಬಿಡುಗಡೆ ಮಾಡಿದ್ದು ಅದೇ ವರದಿಯನ್ನ. ಜಿಡಿಪಿಯಿಂದ ಹಿಡಿದು ಭಾರತದ ಆರ್ಥಿಕ ಅಂಕಿಅಂಶಗಳ ಬಗ್ಗೆ ಅನುಮಾನಗಳೇ ದಟ್ಟವಾಗಿದೆ. ಶನಿವಾರದ ಪ್ರಧಾನಿ ಮೋದಿ ಸರ್ಕಾರದ ಬಜೆಟ್‍ಗೂ ಆ ಅವಿಶ್ವಾಸ ಮತ್ತೆ ಆವರಿಸಿಕೊಂಡರೇ ಅಚ್ಚರಿ ಪಡಬೇಕಿಲ್ಲ.
– ಅಕ್ಷಯ್ ಕುಮಾರ್ ಯು