ನವದೆಹಲಿ: ಗಲ್ಲು ಶಿಕ್ಷೆಯಿಂದ ಪಾರಾಗಲು ದಿನಕ್ಕೊಂದು ನೆಪವೊಡ್ಡಿ ಕಾನೂನು ಕಸರತ್ತು ಮಾಡುತ್ತಿರುವ ನಿರ್ಭಯಾ ಅತ್ಯಾಚಾರಿಗಳಿಗೆ ದೆಹಲಿ ಹೈಕೋರ್ಟ್ 1 ವಾರ ಕಾಲಾವಕಾಶ ನೀಡಿದೆ. ಆ ಬಳಿಕ ಅತ್ಯಾಚಾರಿಗಳನ್ನು ಗಲ್ಲಿಗೇರಿಸೋದು ಖಚಿತವೆಂದು ಹೈಕೋರ್ಟ್ ತಿಳಿಸಿದೆ.
ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಗೆ ಅನಿರ್ಧಿಷ್ಟಾವಧಿ ತಡೆ ನೀಡಿ ಕೆಳ ಹಂತದ ನ್ಯಾಯಾಲಯ ಕೆಲವು ದಿನಗಳ ಹಿಂದೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮತ್ತು ತಿಹಾರ್ ಜೈಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಒಂದು ವಾರದ ಒಳಗೆ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸುವಂತೆ ಸೂಚಿಸಿದೆ. ಆ ಬಳಿಕ ಅಪರಾಧಿಗಳು ಏನೇ ಕಸರತ್ತು ಮಾಡಿದರು ಪ್ರಯೋಜನಕ್ಕಿಲ್ಲ, ಗಲ್ಲು ಶಿಕ್ಷೆಯ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ವಿಚಾರಣಾ ನ್ಯಾಯಾಲಯ ಹೇಳಿದೆ.
ವಿಚಾರಣೆ ವೇಳೆ ನ್ಯಾ. ಸುರೇಶ್ ಕೇತ್, ಒಬ್ಬ ಅಪರಾಧಿಯ ಕ್ಷಮಾದಾನ ಅರ್ಜಿ ಬಾಕಿ ಉಳಿದಿದ್ದರೆ, ಇತರೆ ಅಪರಾಧಿಗಳನ್ನು ನೇಣಿಗೇರಿಸಬಹುದು ಎಂದು ದೆಹಲಿ ಜೈಲು ನಿಯಮಗಳು ಹೇಳುವುದಿಲ್ಲ. ಸುಪ್ರೀಂ ಕೋರ್ಟಿನಲ್ಲಿ ಅಪರಾಧಿಗಳ ಹಣೆ ಬರಹ ಒಂದೇ ತೀರ್ಪಿನಿಂದ ನಿರ್ಧಾರವಾಗಿದೆ. ಎಲ್ಲಾ ಅಪರಾಧಿಗಳ ಗಲ್ಲು ಒಟ್ಟಾಗಿ ಜಾರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತೀರ್ಪಿನ ನಂತರ ನಿರ್ಭಯಾ ತಾಯಿ ಆಶಾ ದೇವಿ ಪ್ರತಿಕ್ರಿಯಿಸಿ, ಪ್ರಕ್ರಿಯೆಗೆ ಹೈಕೋರ್ಟ್ ಗಡುವು ನೀಡಿರುವುದಕ್ಕೆ ಖುಷಿಯಾಗಿದೆ. ಅಪರಾಧಿಗಳು ಗಲ್ಲು ಶಿಕ್ಷೆಯ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡುತ್ತಾ ಬಂದಿದ್ದರು. ಇದೀಗ ಇದನ್ನು ಒಂದು ವಾರದ ಒಳಗೆ ಮುಗಿಸಬೇಕಾಗಿದೆ. ಇದು ಸಂತಸದ ವಿಚಾರ ಎಂದರು.
ಈ ಹಿಂದೆ ಫೆ. 1ರಂದು ಬೆಳಗ್ಗೆ 6 ಗಂಟೆಗೆ ನಿರ್ಭಯಾ ಅಪರಾಧಿಗಳಿಗೆ ಗಲ್ಲಿಗೆ ಏರಿಸಲು ಕೋರ್ಟ್ ಆದೇಶ ನೀಡಿತ್ತು. ಆದರೆ ಅಪರಾಧಿಗಳು ಗಲ್ಲುಶಿಕ್ಷೆ ಜಾರಿ ಮುಂದೂಡಲು ನಾನಾ ಪ್ರಯತ್ನವನ್ನು ಮುಂದುವರಿಸಿದ್ದರು. ಬುಧವಾರ ಅಪರಾಧಿ ವಿನಯ್ ಶರ್ಮಾ ರಾಷ್ಟ್ರಪತಿ ಅವರಿಗೆ ಎರಡನೇ ಬಾರಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು. ಆದರೆ ರಾಷ್ಟ್ರಪತಿಗಳ ತೀರ್ಮಾನ ಪ್ರಕಟವಾಗದ ಹಿನ್ನೆಲೆಯಲ್ಲಿ ಪಟಿಯಾಲ ಕೋರ್ಟ್ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು.
ಇನ್ನೊಂದೆಡೆ ಮತ್ತೋರ್ವ ದೋಷಿ ಪವನ್, ನಾನು ಅಪ್ರಾಪ್ತನಾಗಿದ್ದಾಗ ಈ ಘಟನೆ ನಡೆದಿತ್ತು. ಹೀಗಾಗಿ ನನ್ನನ್ನು ಮರಣದಂಡನೆಗೆ ಒಳಪಡಿಸಬಾರದು ಎಂದು ಸುಪ್ರಿಂ ಕೋರ್ಟ್‍ಗೆ ಮತ್ತೊಮ್ಮೆ ಮನವಿ ಮಾಡಿದ್ದನು. ಈ ಹಿಂದೆಯೇ ತ್ರಿಸದಸ್ಯ ಪೀಠ ಪವನ್ ಅರ್ಜಿಯನ್ನು ತಿರಸ್ಕೃತ ಮಾಡಿತ್ತು. ಹೀಗಾಗಿ ಸುಪ್ರೀಂಕೋರ್ಟಿನ ಸಂವಿಧಾನಿಕ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದನು.
ರಾಷ್ಟ್ರಪತಿಗಳ ಕ್ಷಮಾದಾನದ ತೀರ್ಪಿನ ವಿರುದ್ಧ ಮುಖೇಶ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದನು. ಕಳೆದ ಬುಧವಾರ ಸುಪ್ರೀಂಕೋರ್ಟ್ ಮುಖೇಶ್ ಅರ್ಜಿಯನ್ನು ವಜಾಗೊಳಿಸಿತ್ತು. ಮುಖೇಶ್ ನಂತೆಯೇ ಉಳಿದ ಅಪರಾಧಿಗಳು ಅರ್ಜಿ ಸಲ್ಲಿಸುವ ಮೂಲಕ ಗಲ್ಲು ಏರುವುದಕ್ಕೆ ವಿಳಂಬ ಮಾಡುವ ತಂತ್ರ ಮಾಡುತ್ತಿದ್ದಾರೆ. ಆದರೆ ಅಪರಾಧಿಗಳು ಏನೇ ಮಾಡಿದರೂ ಗಲ್ಲು ಶಿಕ್ಷೆಯನ್ನು ಮಾತ್ರ ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.