ನಿರ್ಭಯಾ ದೋಷಿಗಳಿಗೆ ನಾಳೆಯೇ ಗಲ್ಲು- ಕಾನೂನು ತಜ್ಞರು ಏನು ಹೇಳುತ್ತಾರೆ?

Public TV
3 Min Read
nirbhaya case

ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳು ಕೃತ್ಯ ಎಸಗಿ 2012ರ ಡಿಸೆಂಬರ್ 16ರಿಂದ ಇಂದಿನವರೆಗೆ ಅಂದ್ರೆ 7 ವರ್ಷ 3 ತಿಂಗಳು, 3 ದಿನಗಳು ಕಳೆದಿವೆ. ಮುಖೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಠಾಕೂರ್ ಈವರೆಗೂ ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ನಾಳೆ ಬೆಳಗ್ಗೆ ನಾಲ್ವರನ್ನೂ ಗಲ್ಲಿಗೆ ಏರಿಸುವುದು ಖಚಿತವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ನಾಲ್ಕನೇ ಬಾರಿ ಸಾವಿನ ಬಾಗಿಲಲ್ಲಿ ನಿಂತಿರುವ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳು ನೇಣಿಗೆ ಕೊರೊಳುಡ್ಡುವ ಕಡೆಯ ಕ್ಷಣದವರೆಗೂ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಮಾರ್ಚ್ 20ರ ಬೆಳಗ್ಗೆ 5:30ಕ್ಕೆ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ದೆಹಲಿಯ ಪಟಿಯಾಲ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇಂದು ಈ ಅರ್ಜಿ ವಿಚಾರಣೆಗೆ ನಡೆಯಲಿದೆ. ನಿನ್ನೆ ಅರ್ಜಿ ಸಲ್ಲಿಸಿರುವ ನಾಲ್ವರು ದೋಷಿಗಳು ಶಿಕ್ಷೆಗೆ ತಡೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಪ್ರಕರಣದ ನಾಲ್ವರು ದೋಷಿಗಳ ಕಾನೂನು ಹೋರಾಟ ಬಾಕಿ ಉಳಿದಿದ್ದು, ಅದಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

Patiala Nirbhaya

ಕ್ಷಮಾದಾನ ಅರ್ಜಿ ವಜಾ ಮಾಡಿರುವುದನ್ನು ಪುನರ್ ಪರಿಶೀಲನೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ಇನ್ನು ಬಾಕಿ ಇದ್ದು, ಈ ಅರ್ಜಿ ಇತ್ಯರ್ಥವಾಗಬೇಕಿದೆ. ಘಟನೆ ನಡೆದ ವೇಳೆ ಬಾಲಾಪರಾಧಿಯಾಗಿದ್ದೆ. ಹೀಗಾಗಿ ಶಿಕ್ಷೆ ಕಡಿತಗೊಳಿಸಬೇಕೆಂದು ಕೋರಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಕ್ಯುರೆಟಿವ್ ಅರ್ಜಿ ಬಾಕಿ ಇದೆ. ಅಲ್ಲದೆ ತಿಹಾರ್ ಜೈಲು ಸಿಬ್ಬಂದಿ ಥಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಬೇಕಿದ್ದು, ಈ ವೇಳೆ ಗಲ್ಲು ಶಿಕ್ಷೆಗೆ ಒಳಪಡಿಸುವುದು ಸರಿಯಲ್ಲ ಎಂದು ದೋಷಿ ಪವನ್ ಗುಪ್ತಾ ಅರ್ಜಿಯಲ್ಲಿ ಮನವಿ ಮಾಡಿದ್ದಾನೆ.

ಪ್ರಕರಣದ ಮತ್ತೊರ್ವ ಆರೋಪಿ ಅಕ್ಷಯ್ ಕುಮಾರ್ ಪತ್ನಿ ವಿಚ್ಛೇದನ ನೀಡುವಂತೆ ಬಿಹಾರದಲ್ಲಿ ಕೊರ್ಟ್ ಮೊರೆ ಹೋಗಿದ್ದು, ಅದರ ವಿಚಾರಣೆ ಸಹ ನಡೆಬೇಕಿದೆ. ವಿನಯ್ ಶರ್ಮಾ ತನ್ನ ಕ್ಷಮದಾನ ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಕುರಿತು ವಿಚಾರಣೆ ನಡೆಬೇಕಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

nirbhaya convict 2

ಇಷ್ಟು ಮಾತ್ರವಲ್ಲದೆ ಮೂವರು ದೋಷಿಗಳು ಅಂತರರಾಷ್ಟ್ರೀಯ ಕೋರ್ಟ್ ಮೊರೆ ಹೋಗಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ. ಈ ಎಲ್ಲ ಪ್ರಕರಣಗಳು ವಿಚಾರಣೆ ನಡೆಯಬೇಕಿದ್ದು, ಇದಕ್ಕೂ ಮುನ್ನ ಅಪರಾಧಿಗಳನ್ನು ಶಿಕ್ಷಿಸುವುದು ಸರಿಯಲ್ಲ ಎಂದು ವಕೀಲ ಎ.ಪಿ.ಸಿಂಗ್ ಪಟಿಯಾಲ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದಾರೆ.

ಇಂದು ಈ ಅರ್ಜಿ ನ್ಯಾ.ಧರ್ಮೇಂದ್ರ ರಾಣಾ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು, ಈಗಾಗಲೇ ನಾಲ್ಕು ಬಾರಿ ಜೀವದಾನ ಸಿಕ್ಕಿರುವ ನಾಲ್ವರು ದೋಷಿಗಳಿಗೆ ಸಾವಿನ ಕಡೆಯ ದಿನ ಐದನೇ ಬಾರಿ ಜೀವದಾನ ಸಿಕ್ಕುತ್ತಾ, ಅಥವಾ ಗಲ್ಲು ನಿಶ್ಚಿತವೇ ಎಂಬುದನ್ನು ಕಾದು ನೋಡಬೇಕಿದೆ.

Akshay Kumar Singh nirbhaya

ವಿಚ್ಛೇದನ ಅರ್ಜಿ:
ಗಲ್ಲಿಗೇರಿಸುವ ಎರಡು ದಿನಗಳ ಮೊದಲು ತಪ್ಪಿತಸ್ಥ ಅಕ್ಷಯ್ ಪತ್ನಿ ಪುನಿತಾ ವಿಚ್ಛೇದನ ಕೋರಿ ಬಿಹಾರದ ಔರಂಗಾಬಾದ್ ಜಿಲ್ಲೆಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಳು. ನಾನು ವಿಧವೆಯಾಗಿ ಬದುಕಲು ಬಯಸುವುದಿಲ್ಲ. ಆದ್ದರಿಂದ ನೇಣು ಹಾಕುವ ಮೊದಲು ನಾವು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯುತ್ತೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದಳು.

ಈ ಅರ್ಜಿಯಿಂದಾಗಿ ಅಪರಾಧಿಗಳ ಗಲ್ಲಿಗೇರಿಸುವುದನ್ನು ಮುಂದೂಡಬಹುದೇ ಎಂಬ ಪ್ರಶ್ನೆ ಎದ್ದಿತ್ತು. ಆದರೆ ವಿಚ್ಛೇದನವು ಸಿವಿಲ್ ಪ್ರಕರಣಗಳಲ್ಲಿ ಬರುತ್ತದೆ. ಹೀಗಾಗಿ ಆ ಅರ್ಜಿ ಕ್ರಿಮಿನಲ್ ಪ್ರಕರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಕಾರಣಕ್ಕಾಗಿ ಮಾರ್ಚ್ 20ರಂದು ಬೆಳಗ್ಗೆ 5:30ಕ್ಕೆ ಅಪರಾಧಿಗಳನ್ನು ಗಲ್ಲಿಗೇರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

nirbhaya convict 1

ದೋಷಿಗಳಿಗೆ ಎಲ್ಲಾ ಮಾರ್ಗ ಬಂದ್:
ಡೆತ್ ವಾರಂಟ್ ಮತ್ತು ಮರಣದಂಡನೆ ದಿನಾಂಕದ ನಡುವೆ 14 ದಿನಗಳ ವ್ಯತ್ಯಾಸ ಇರಬೇಕು ಎಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಹೇಳುತ್ತವೆ. ಮಾರ್ಚ್ 5ರಂದು ಅಪರಾಧಿಗಳ ಡೆತ್ ವಾರಂಟ್ ಹೊರಡಿಸಲಾಗಿದೆ. ಅಷ್ಟೇ ಅಲ್ಲದೆ ಅಪರಾಧಿಗಳಿಗೆ ಎಲ್ಲಾ ಕಾನೂನು ಮಾರ್ಗಗಳು ಸಹ ಮುಗಿದಿವೆ. ಮರಣದಂಡನೆಗೆ ಗುರಿಯಾದ ಅಪರಾಧಿಗೆ ಎಲ್ಲಾ ಕಾನೂನು ಮಾರ್ಗಗಳನ್ನು ಬಳಸುವ ಹಕ್ಕಿದೆ. ಈ ನಿಟ್ಟಿನಲ್ಲಿ ನಾಲ್ವರು ಸಹ ತಮ್ಮ ಎಲ್ಲಾ ಕಾನೂನು ಹಕ್ಕುಗಳನ್ನು ಸಹ ಬಳಸಿದ್ದಾರೆ. ನಾಲ್ವರ ಪರಿಶೀಲನಾ ಅರ್ಜಿಗಳು ಮತ್ತು ಕ್ಷಮಾದಾನ ಅರ್ಜಿಗಳನ್ನು ಸಹ ವಜಾಗೊಂಡಿವೆ.

ಅಪರಾಧಿಗಳು ಗಲ್ಲಿಗೇರಿಸುವುದನ್ನು ತಪ್ಪಿಸಲು ಇಂದು ಕೂಡ ಅರ್ಜಿಯನ್ನು ಹಾಕಿದರೂ ಅವರನ್ನು ಗಲ್ಲಿಗೇರಿಸುವುದನ್ನು ತಪ್ಪಿಸುವುದು ತುಂಬಾ ಕಡಿಮೆ. ಏಕೆಂದರೆ ಭಯೋತ್ಪಾದಕ ಯಾಕೂಬ್ ಮೆಮನ್ ನೇಣು ಹಾಕುವ ಒಂದು ದಿನ ಮೊದಲು ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರ ವಕೀಲರು ರಾತ್ರಿ ಸುಪ್ರೀಂ ಕೋರ್ಟಿಗೆ ತಲುಪಿದರು. ಆದರೆ ಇದರ ಹೊರತಾಗಿಯೂ ಅವನ ನೇಣು ನಿಲ್ಲಲಿಲ್ಲ.

court 1

Share This Article