– ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು
– ಪೋಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು
ನವದೆಹಲಿ: ಮಹಿಳೆಯರ ಮೇಲಿನ ಹಲ್ಲೆ ಹಾಗೂ ಅತ್ಯಾಚಾರದಂತಹ ಭೀಕರ ಅಪರಾಧಗಳನ್ನು ತಡೆಯಲು ಸರ್ಕಾರ ಯೋಗ ಮತ್ತು ನೈತಿಕ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಯೋಗ ಗುರು ಬಾಬಾ ರಾಮ್‍ದೇವ್ ಅಭಿಪ್ರಾಯಪಟ್ಟಿದ್ದಾರೆ.
ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಅಪರಾಧಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಬೇಕಾದಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಯೋಗ ಮತ್ತು ನೈತಿಕ ಶಿಕ್ಷಣವನ್ನು ಪಠ್ಯದ ಭಾಗವಾಗಿಸಬೇಕು. ಪೋಷಕರು ಸಹ ತಮ್ಮ ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.
ನರಭಕ್ಷಕರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ನ್ಯಾಯಾಂಗವು ಇತಿಹಾಸ ನಿರ್ಮಿಸಿದೆ. ಇಂತಹ ಕೃತ್ಯ ಎಸಗಿದವರಿಗೆ ಯಾವ ರೀತಿಯ ಶಿಕ್ಷೆಯಾಗುತ್ತದೆ ಎಂಬುದನ್ನು ತೋರಿಸಿದೆ. ಅಲ್ಲದೆ ಮುಂದೆ ಯಾರಾದರೂ ಇಂತಹ ಘೋರ ಅಪರಾಧಗಳನ್ನು ಮಾಡುವವರಿಗೆ ಭಯ ಹುಟ್ಟಿಸುವಂತೆ ಮಾಡಿದೆ. ಈ ಪ್ರಕರಣವು ವಿಶ್ವ ಮಟ್ಟದಲ್ಲಿ ನಮ್ಮ ದೇಶದ ಚಿತ್ರಣವನ್ನು ಬಿಂಬಿಸಿದೆ ಎಂದು ಬಾಬಾ ರಾಮ್‍ದೇವ್ ಅಭಿಪ್ರಾಯಪಟ್ಟಿದ್ದಾರೆ.
2012ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ದೊರಕಿದೆ. ನಿರ್ಭಯಾ ಪ್ರಕರಣದ ದೋಷಿಗಳಿಗೆ ಇಂದು ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ.
ಇಂದು ಬೆಳಗಿನ ಜಾವ ಮೂರು ಗಂಟೆವರೆಗೂ ದೋಷಿಗಳು ಡೆತ್ ವಾರೆಂಟ್ ಮುಂದೂಡಲು ಪ್ರಯತ್ನಿಸಿದ್ದರು. ಪಟಿಯಾಲಾ ಹೌಸ್ ಕೋರ್ಟ್ ನೀಡಿರುವ ಡೆತ್ ವಾರೆಂಟ್ ಗೆ ತಡೆ ನೀಡುವಂತೆ ಗುರುವಾರ ರಾತ್ರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನಲ್ಲಿ ಅರ್ಜಿ ವಜಾಗೊಳ್ಳುತ್ತಿದ್ದಂತೆ ಮಧ್ಯರಾತ್ರಿ ಸುಪ್ರೀಂಕೋರ್ಟಿಗೆ ಹೋಗಿ ತುರ್ತು ಅರ್ಜಿ ವಿಚಾರಣೆ ನಡೆಸಬೇಕೆಂದು ದೋಷಿಗಳು ಮನವಿ ಮಾಡಿಕೊಂಡಿದ್ದರು.
ಮಧ್ಯರಾತ್ರಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಾದ-ಪ್ರತಿವಾದವನ್ನು ಆಲಿಸಿತು. ತದನಂತರ ಅರ್ಜಿಯನ್ನು ವಜಾಗೊಳಿಸಿತು. ಇತ್ತ ಅರ್ಜಿ ವಜಾಗೊಳ್ಳುತ್ತಿದ್ದಂತೆ ತಿಹಾರ್ ಜೈಲಿನ ಮುಂದೆ ಜನ ಸೇರಲು ಆರಂಭಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ತಿಹಾರ ಜೈಲಿನ ಆವರಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.