ದೇಶ ಬಿಟ್ಟು ಪರಾರಿಯಾಗಿದ್ದ ನೀರವ್ ಮೋದಿ ಕೊನೆಗೂ ಅರೆಸ್ಟ್

Public TV
2 Min Read
nirav modi fb

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿ ಇಂಗ್ಲೆಂಡಿನಲ್ಲಿ ತಲೆಮರೆಸಿಕೊಂಡಿದ್ದ ವಜ್ರ ಉದ್ಯಮಿ ನೀರವ್ ಮೋದಿಯನ್ನು ಬಂಧಿಸಲಾಗಿದೆ.

ಲಂಡನ್ ನಲ್ಲಿ ನೆಲೆಸಿದ್ದ ಬಗ್ಗೆ ಮಾಧ್ಯಮ ವರದಿ ಪ್ರಕಟವಾದ ಬಳಿಕ ಭಾರತ ಸರ್ಕಾರ ಇಂಗ್ಲೆಂಡ್ ಸರ್ಕಾರದ ಜೊತೆ ನೀರವ್ ಬಂಧನಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿತ್ತು. ಇದಾದ ಬಳಿಕ ಬ್ರಿಟನ್‍ನ ವೆಸ್ಟ್ ಮಿನ್‍ಸ್ಟರ್ ಕೋರ್ಟ್ ನೀರವ್ ಮೋದಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ನೀರವ್ ಮೋದಿ ಬಂಧನವಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

pnb

ಲಂಡನ್ ನಲ್ಲಿ ರಾಜರೋಷವಾಗಿ ಓಡಾಡುತ್ತಿರವ ನೀರವ್ ಮೋದಿ ಬಗ್ಗೆ ಟೆಲಿಗ್ರಾಫ್ ಮಾರ್ಚ್ 9 ರಂದು ವರದಿ ಮಾಡಿತ್ತು. ಪತ್ರಕರ್ತರು ಕೇಳಿದ ಎಲ್ಲ ಪ್ರಶ್ನೆಗಳಿಗೆ “ನೋ ಕಮೆಂಟ್ಸ್” ಎಂದು ಉತ್ತರಿಸಿದ್ದರು. 13 ಸಾವಿರ ಕೋಟಿ ರೂ. ವಂಚನೆಗೈದ ಆರೋಪಿ ನೀರವ್ ಮೋದಿಗೆ ಇನ್ನು ಎಷ್ಟು ದಿನ ಲಂಡನ್ ನಲ್ಲಿ ಇರಲಿದ್ದೀರಿ ಎನ್ನುವ ಪ್ರಶ್ನೆಗೆ ಅವರಿಂದ ಯಾವುದೇ ಉತ್ತರ ಸಿಕ್ಕಿರಲಿಲ್ಲ.

48 ವರ್ಷದ ನೀರವ್ ಮೋದಿ ಲಂಡನ್ ನಗರದಲ್ಲಿ ಹೋದ ಎಲ್ಲ ಕಡೆ ಪತ್ರಕರ್ತರು ಅವರನ್ನು ಹಿಂಬಾಲಿಸಿದ್ದರು. ಆದರೆ ಯಾವುದೇ ಪ್ರಶ್ನೆಗೆ ಉತ್ತರಿಸಲಿಲ್ಲ. ಕೊನೆಗೆ ನೀರವ್ ಮೋದಿ ಟ್ಯಾಕ್ಸಿ ಮಾಡಿ ಹೊರಟು ಹೋಗಿರುವ ದೃಶ್ಯ ಸೆರೆಯಾಗಿತ್ತು.

pnb fraud case

ನೀರವ್ ಮೋದಿ ಪಶ್ಚಿಮ ಲಂಡನ್ ನಲ್ಲಿರುವ ಸೊಹೊ ಪ್ರದೇಶದಲ್ಲಿ ಹೊಸ ವಜ್ರದ ವ್ಯಾಪಾರ ಆರಂಭಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿತ್ತು. ಪ್ರಶ್ನೆ ಕೇಳುವಾಗ ನೀರವ್ ಮೋದಿ ಕಪ್ಪು ಬಣ್ಣದ ಆಸ್ಟ್ರೀಚ್ ಕಂಪನಿಯ ಜಾಕೆಟ್ ಧರಿಸಿದ್ದರು. ಸಾಧಾರಣವಾಗಿ ಆಸ್ಟ್ರೀಚ್ ಕಂಪನಿಯ ಈ ಜಾಕೆಟ್ ಬೆಲೆ 10 ಸಾವಿರ ಡಾಲರ್(6.99 ಲಕ್ಷ ರೂ.)ನಿಂದ ಆರಂಭವಾಗುತ್ತದೆ.

ಜೀವಕ್ಕೆ ಅಪಾಯವಿದೆ:
ಭಾರತಕ್ಕೆ ಬಂದರೆ ನನ್ನ ಕಕ್ಷಿದಾರರ ಜೀವಕ್ಕೆ ಅಪಾಯವಿದೆ ಎಂದು ವಜ್ರ ವ್ಯಾಪಾರಿ ನೀರವ್ ಮೋದಿ ವಕೀಲರು ಈ ಹಿಂದೆ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದರು. ಒಂದು ವೇಳೆ ನಾನು ಭಾರತಕ್ಕೆ ಬಂದರೆ ಜೀವಕ್ಕೆ ಅಪಾಯವಿದೆ. ಕೊಲೆ ಬೆದರಿಕೆ ಕೇಳಿಬಂದಿದೆ. ಇದರಿಂದಾಗಿ ನಾನು ಭಾರತಕ್ಕೆ ಬರುವುದಿಲ್ಲ ಅಂತಾ ನೀರವ್ ಮೋದಿ ತಿಳಿಸಿದ್ದಾರೆ ಎಂದು ವಕೀಲ ಇಡಿ ಅಧಿಕಾರಿಗಳಿಗೆ ತಿಳಿಸಿದ್ದರು.

nirav modi

ಇಡಿ ಅಧಿಕಾರಿಗಳು ನೀರವ್ ಕಂಪನಿ, ಆಸ್ತಿಯನ್ನು ವಶಕ್ಕೆ ಪಡೆದಿದ್ದರಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಅಷ್ಟೇ ಅಲ್ಲದೇ ನೀರವ್ ಬಾಡಿಗೆ ಪಡೆದಿದ್ದ ಜಾಗದ ಮಾಲೀಕರಿಗೆ ಹಣ ಪಾವತಿಸಿಲ್ಲ, ವಜ್ರಾಭರಣಕ್ಕಾಗಿ ಮುಂಗಡ ಹಣ ನೀಡಿದ್ದವರು ತಮ್ಮ ಹಣವನ್ನು ಮರಳಿಸುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಪ್ರಾಣ ಬೆದರಿಕೆ ಇರುವ ಕಾರಣ ನೀರವ್ ಮೋದಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ವಕೀಲರು ಹೇಳಿಕೆ ನೀಡಿದ್ದರು.

ಏನಿದು ಪ್ರಕರಣ?:
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿದ ಆರೋಪ ನೀರವ್ ಮೋದಿ ಮೇಲಿದೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯಕ್ಕೆ ಮುಟ್ಟುಗೋಲು ಹಾಕಿದೆ.

Nirav Modi 1

Share This Article
Leave a Comment

Leave a Reply

Your email address will not be published. Required fields are marked *