– ಸೋಂಕಿನ ಶಂಕೆ ಕಂಡು ಬಂದ್ರೆ ತಡ ಮಾಡದೆ ಆಸ್ಪತ್ರೆಗೆ ಹೋಗಿ
ಬೆಂಗಳೂರು: ಕೇರಳದಲ್ಲಿ ಭೀತಿ ಹುಟ್ಟಿಸಿರುವ ನಿಫಾ ಸೋಂಕು ಕರ್ನಾಟಕದಲ್ಲೂ ಆತಂಕ ಸೃಷ್ಟಿಸಿದೆ. ಕೇರಳಕ್ಕೆ ಹೊಂದಿಕೊಂಡಿರುವ 8 ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ನಿಗಾ ವಹಿಸಲಾಗಿದೆ. ಅಲ್ಲದೇ ಪ್ರತಿದಿನ ವೈದ್ಯಕೀಯ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ. ಒಂದು ವೇಳೆ ನಿಫಾ ಸೋಂಕು ಪತ್ತೆಯಾದಲ್ಲಿ ಅವರನ್ನು ಜನರಿಂದ ಪ್ರತ್ಯೇಕಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಸೂಚನೆ ನೀಡಿದ್ದಾರೆ.
Advertisement
Advertisement
ನಿಫಾ ಸೋಂಕು ಶಂಕಿತ ವ್ಯಕ್ತಿಗಳಿಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಬೇಕು. ಜೊತೆಗೆ ತಮಿಳುನಾಡಿನ ಊಟಿ, ನೀಲಗಿರಿ, ಕನ್ಯಾಕುಮಾರಿ, ಕೊಯಮುತ್ತೂರು, ದಿಂಡಿಗಲ್, ತಿರುವನ್ವೇಲಿ, ತೇಣಿಯಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ಕೇರಳಕ್ಕೆ ತೆರಳುವವರಿಗೆ ಮಾಸ್ಕ್ ಧರಿಸಿ ತೆರಳಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
Advertisement
ಎರ್ನಾಕುಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾಲೇಜು ವಿದ್ಯಾರ್ಥಿಯಲ್ಲಿ ನಿಫಾ ಸೋಂಕು ಪತ್ತೆಯಾಗಿದೆ. ಹೀಗಾಗಿ, ರಾಜ್ಯದ ಗಡಿಭಾಗದಲ್ಲಿ ಭಾರೀ ನಿಗಾ ವಹಿಸಲಾಗಿದೆ. ನಿಫಾ ಸೋಂಕಿನ ಬಗ್ಗೆ ಯಾರಿಗಾದರು ಅನುಮಾನ ಬಂದರೆ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಿ ಎಂದು ಶಿವಾನಂದ ಪಾಟೀಲ್ ಹಾಗೂ ಮೇಯರ್ ಗಂಗಾಬಿಕಾ ಅವರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
Advertisement
ಕೊಡಗು ಜಿಲ್ಲೆಯಲ್ಲಿಯೂ ನಿಫಾ ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಎಲ್ಲಾ ವೈದ್ಯಾಧಿಕಾರಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.