ಹೈದರಾಬಾದ್: ಟ್ರ್ಯಾಕ್ಟರ್ ಕಾಲುವೆಗೆ ಉರುಳಿ ಬಿದ್ದ ಪರಿಣಾಮ 9 ಮಂದಿ ಕಾರ್ಮಿಕ ಮಹಿಳೆಯರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪಡಮಟಿ ತಾಂಡಾ ಬಳಿ ನಡೆದಿದೆ.
ಮೃತರನ್ನು ರಾಮವತ್ ಸೋನಾ(70), ರಾಮವತ್ ಜಿಜಾ (65) ಜರುಕುಲಾ ದ್ವಾಲಿ (30), ರಾಮವತ್ ಕೇಳಿ(50), ರಾಮವತ್ ಕಂಸಾಲಿ(50), ಬನವತ್ ಬೆರಿ(55), ರಾಮವತ್ ಭಾರತಿ(35) ಮತ್ತು ರಾಮವತ್ ಸುನಿತಾ(30) ಎಂದು ಗುರುತಿಸಲಾಗಿದೆ.
30 ಮಂದಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ವೇಳೆ ಟ್ರ್ಯಾಕ್ಟರ್ ಕಾಲುವೆಗೆ ಉರುಳಿ ಬಿದ್ದಿದೆ. ಪರಿಣಾಮ 9 ಮಂದಿ ಜಲಸಮಾಧಿಯಾಗಿದ್ದಾರೆ. ಇವರೆಲ್ಲರೂ ಪಡಮಟಿ ತಾಂಡಾ ನಿವಾಸಿಗಳೆಂದು ತಿಳಿದುಬಂದಿದ್ದು, ಮಂಡಾಲ್ ನಲ್ಲಿರುವ ಪುಲಿಚೆರ್ಲಾ ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಘಟನೆಗೆ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗುತ್ತಿದೆ. ಟ್ರ್ಯಾಕ್ಟರ್ ಚಾಲನೆ ವೇಳೆ ಚಾಲಕ ಫೋನ್‍ನಲ್ಲಿ ಮಾತನಾಡಿದ್ದನು ಎನ್ನಲಾಗಿದ್ದು, ಜೊತೆಗೆ ಚಾಲಕ ನಿದ್ರೆಯಲ್ಲಿದ್ದ ಎಂಬುವುದರ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ಸದ್ಯ ಘಟನೆಯಿಂದಾಗಿ ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಸ್ಥಳೀಯ ನಿವಾಸಿಗಳು, ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ.
#Visuals from Telangana: Nine dead, several injured after the tractor-trolley they were travelling in fell into a canal in Nalgonda. pic.twitter.com/9fCVcEp1Yi
— ANI (@ANI) April 6, 2018