ಚೆನ್ನೈ: ತಮಿಳುನಾಡಿನ (Tamil Nadu) ಎನ್ನೋರ್‌ನಲ್ಲಿ (Ennore) ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಹಂತದಲ್ಲಿದ್ದ ಕಮಾನು (Arch) ಕುಸಿದು ಒಂಬತ್ತು ಕಾರ್ಮಿಕರು ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನಿರ್ಮಾಣ ಹಂತದಲ್ಲಿದ್ದ ಕಮಾನು ಸುಮಾರು 30 ಅಡಿಗಳಷ್ಟು ಎತ್ತರದಿಂದ ಕುಸಿದು ಬಿದ್ದಿದೆ. ಪರಿಣಾಮ ನಿರ್ಮಾಣ ಕಾರ್ಯದಲ್ಲಿದ್ದ ಕಾರ್ಮಿಕರ ಮೇಲೆಯೇ ಕಮಾನು ಬಿದ್ದಿದೆ. ಕಮಾನಿನಡಿ ಸಿಲುಕಿ 9 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರು | ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮಣ್ಣು ಕುಸಿದು ಇಬ್ಬರು ಸಾವು
ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಉತ್ತರ ಚೆನ್ನೈನ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡು ವಿದ್ಯುತ್ ಮಂಡಳಿಯ ಕಾರ್ಯದರ್ಶಿ ಮತ್ತು ತಮಿಳುನಾಡು ಉತ್ಪಾದನೆ ಮತ್ತು ವಿತರಣಾ ನಿಗಮ ಲಿಮಿಟೆಡ್ ಅಧ್ಯಕ್ಷ ಡಾ.ಜೆ.ರಾಧಾಕೃಷ್ಣನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ನಲ್ಲಿ ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರವನ್ನು ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಹಾಗೂ ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರು ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.
 
					
 
		 
		 
		 
		 
		 
		 
		 
		 
		