ಬೆಂಗಳೂರು: ಐಎಎಸ್ ಅಧಿಕಾರಿ ಡಿಕೆ ರವಿ ಸಾವು ಕೊಲೆಯಲ್ಲ ಆತ್ಮಹತ್ಯೆ ಅಂತ ಸರ್ಕಾರಿ ಫರ್ಮಾನು ಹೊರ ಬಿದ್ದು ವರ್ಷಗಳೇ ಕಳೆದಿವೆ. ಆದರೂ ಈ ನೆಲದ ಜನಸಾಮಾನ್ಯರು, ರವಿಯವರನ್ನು ಹತ್ತಿರದಿಂದ ಬಲ್ಲವರು ಮಾತ್ರ ಅದೊಂದು ಆತ್ಮಹತ್ಯೆ ಅನ್ನೋದನ್ನು ಈ ಕ್ಷಣಕ್ಕೂ ಒಪ್ಪಿಕೊಂಡಿಲ್ಲ. ಹೀಗೆ ಜನಸಾಮಾನ್ಯರ ಗುಮಾನಿಗಳಿಗೆ ತಕ್ಕುದಾಗಿಯೇ ಅದ್ಭುತವಾದೊಂದು ಕಥಾನಕ ಹೊಂದಿರೋ ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ತೆರೆ ಕಂಡಿದೆ. ಈ ಮೂಲಕವೇ ಸಿನಿಮಾದಾಚೆಗಿನ ಸತ್ಯವೊಂದಕ್ಕೆ ಸೀಮಿತ ಚೌಕಟ್ಟಿನಲ್ಲಿಯೇ ಕನ್ನಡಿ ಹಿಡಿಯೋ ಪರಿಣಾಮಕಾರಿ ಪ್ರಯತ್ನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
Advertisement
ಆತ ಯಾವ ಊರಿಗೇ ಅಧಿಕಾರಿಯಾಗಿ ಹೋದರೂ ಜನರ ನಡುವೆಯೇ ಬೆರೆತು, ಜನರ ಒಳಿತನ್ನೇ ಉಸಿರಾಡೋ ಅಪರೂಪದ ಅಧಿಕಾರಿ. ಅವರ ಪ್ರಾಮಾಣಿಕತೆಗೆ ಆಯಾ ಭಾಗದ ಸಾಮಾನ್ಯ ಜನರೂ ಬೆರಗಾಗುತ್ತಾರೆ. ಭ್ರಷ್ಟಾಚಾರವನ್ನ ಬುಡ ಸಮೇತ ಕಿತ್ತು ಹಾಕಿ ಜನಸಾಮಾನ್ಯರ ಜೀವನವನ್ನ ಹಸನಾಗಬೇಕೆನ್ನೋದು ಆತನ ಗುರಿ. ಆದರೆ ಅಧಿಕಾರಸ್ಥರು, ಅವರ ಚೇಲಾಗಳು ಈ ಅಧಿಕಾರಿಯ ವಿರುದ್ಧವೇ ಗುರಾಣಿಯ ಗುರಿಯಿಡುತ್ತಾರೆ. ಅದರ ಫಲವಾಗಿ ಪದೇ ಪದೇ ವರ್ಗಾವಣೆಯ ಅಸ್ತ್ರವೂ ಈ ಅಧಿಕಾರಿಯ ಮೇಲೆ ಪ್ರಯೋಗವಾಗುತ್ತಿರುತ್ತೆ.
Advertisement
ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಅಧಿಕಾರಿ ಎಲ್ಲಿಗೇ ಹೋದರೂ, ಯಾವ ಇಲಾಖೆಗೇ ವರ್ಗಾವಣೆ ಆದರೂ ಜನಪರತೆಯನ್ನೇ ಉಸಿರಾಡುತ್ತಾನೆ. ಕಡೆಗೂ ಒಂದಿನ ಈತ ರೇಡು ಮಾಡಿದ ದಾಖಲೆಗಳನ್ನು ಕದಿಯಲು ನಡೆಯೋ ಅಧಿಕಾರಸ್ಥರ ಸಾಹಸ, ಅದಕ್ಕೆ ಸಾಥ್ ನೀಡೋ ಕಿರಾತಕರು… ಅಲ್ಲೊಂದು ಭೀಕರ ಕೊಲೆ ಮತ್ತು ಅದನ್ನು ಆತ್ಮಹತ್ಯೆ ಅಂತ ನಿರೂಪಿಸೋ ಸರ್ಕಸ್ಸು…
Advertisement
Advertisement
ಇದು ಡಿಕೆ ರವಿ ಸಾವಿನ ಸುತ್ತಲಿನ ಕಥೆ ಅನ್ನೋದಕ್ಕೆ ಇದಕ್ಕಿಂತಲೂ ಯಾವ ಪುರಾವೆಯೂ ಬೇಕಿಲ್ಲ. ಜೇಕಬ್ ವರ್ಗೀಸ್ ರವಿ ಸಾವಿನ ಸುತ್ತಲಿನ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿ ಈ ಕಥೆ ಸಿದ್ಧಪಡಿಸಿದ್ದಾರೆ. ಯಾವ ಅಬ್ಬರವೂ ಇಲ್ಲದೆ ತಣ್ಣಗೆ ನಿರೂಪಿಸಿದ್ದಾರೆ. ನೀನಾಸಂ ಸತೀಶ್ ಅಂತೂ ಡಿ.ಕೆ.ರವಿಯವರನ್ನೇ ಆವಾಹಿಸಿಕೊಂಡು ನಟಿಸಿದ್ದಾರೆ. ಸೋನು ಗೌಡ ಸೇರಿದಂತೆ ಎಲ್ಲ ಪಾತ್ರಗಳೂ ಕಾಡುವಂತೆ ಮೂಡಿ ಬಂದಿವೆ. ಕಡೆಯ ಕೆಲ ಸೀನುಗಳಲ್ಲಂತೂ ಅವರು ನಟನಾಗಿ ವಿಜೃಂಭಿಸಿದ್ದಾರೆ.
ಒಟ್ಟಾರೆಯಾಗಿ ಒಂದು ಕಹಿ ಸತ್ಯವನ್ನ ಜೇಕಬ್ ಈ ಸಿನಿಮಾ ಮೂಲಕ ಜಾಹೀರು ಮಾಡಿದ್ದಾರೆ. ಈ ಮೂಲಕ ಸಿನಿಮಾ ಮಾಧ್ಯಮದ ಶಕ್ತಿ ಏನೆಂಬುದನ್ನೂ ಜಾಹೀರು ಮಾಡಿದ್ದಾರೆ. ಈ ಕಾರಣದಿಂದಲೇ ಈ ಸಿನಿಮಾ ಜನರಿಗಿಷ್ಟವಾಗೋದರಲ್ಲಿ ಯಾವ ಅನುಮಾನವೂ ಇಲ್ಲ.
ರೇಟಿಂಗ್: 4/5
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv