ಕಿನ್ನಾಳ್ ರಾಜ್ ನಿರ್ದೇಶನದ `ಸಿಂಹರೂಪಿಣಿ’ (Simha Roopini )ಚಿತ್ರ ಈ ವಾರ ಅಂದರೆ, ಅಕ್ಟೋಬರ್ ೧೭ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ನೂರೈವತ್ತಕ್ಕೂ ಹೆಚ್ಚು ಕಲಾವಿದರ ಬೃಹತ್ ತಾರಾಗಣವಿದೆ. ಮನೋರಂಜನೆಯೂ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರುವ ಈ ಸಿನಿಮಾ ಮಾರಮ್ಮದೇವಿಯ ಕಥಾನಕವನ್ನೊಳಗೊಂಡಿದೆ. ಈ ಸಿನಿಮಾದ ಮಹತ್ವದ ಪಾತ್ರವೊಂದನ್ನು ನೀನಾಸಂ ಅಶ್ವಥ್ (Ninasam Aswath) ನಿರ್ವಹಿಸಿದ್ದಾರೆ. ಬೇರೆ ಬಗೆಯ ಸಿನಿಮಾಗಳ ಜೊತೆ ಜೊತೆಗೇ, ಇತರೇ ಸ್ವರೂಪಗಳ ಕಥೆಗಳೂ ದೃಶ್ಯರೂಪ ಧರಿಸಬೇಕು ಎಂಬ ಮನಃಸ್ಥಿತಿ ಹೊಂದಿರುವವರು ಅಶ್ವಥ್. ಇದರಿಂದಾಗಿಯೇ ಖುಷಿಯಿಂದ ಈ ಸಿನಿಮಾ ಪಾತ್ರವನ್ನು ಆವಾಹಿಸಿಕೊಂಡಿರುವ ಅವರ ಅಶ್ವಥ್ ಪಾಲಿಗೆ ಇದೊಂದು ಭಿನ್ನ ಬಗೆಯ ಚಿತ್ರ.
ಇಲ್ಲಿ ಮಾರಮ್ಮ ದೇವಿಯ ತಂದೆಯ ಪಾತ್ರದಲ್ಲಿ ನೀನಾಸಂ ಅಶ್ವಥ್ ನಟಿಸಿದ್ದಾರೆ. ಎರಡು ಶೇಡುಗಳನ್ನು ಹೊಂದಿರುವ ಆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ತೃಪ್ತಿ ಅದರಲ್ಲಿದೆ. ಗ್ರಾಮೀಣ ಪ್ರತಿಭೆ ಕಿನ್ನಾಳ್ ರಾಜ್ ಅವರ ಸಮರ್ಪಣಾ ಮನೋಭಾವ, ಸಿನಿಮಾದೊಂದಿಗೆ ಸಹಯಾನ ಮಾಡುವ ಮನಃಸ್ಥಿತಿಯ ನಿರ್ಮಾಪಕ ಕೆ.ಎಂ ನಂಜುಂಡೇಶ್ವರ ಅವರ ಸಿನಿಮಾ ಪ್ರೇಮದ ಬಗ್ಗೆ ಮೆಚ್ಚುಗೆ ಮೂಡಿಸಿಕೊಂಡಿರುವ ಅಶ್ವಥ್ ಈ ಸಿನಿಮಾವನ್ನು ಕನ್ನಡ ಚಿತ್ರರಂಗದ ಹೊಸಾ ಹರಿವಿನ ಭಾಗವಾಗಿ ಪರಿಗಣಿಸಿದ್ದಾರೆ. ಬರೀ ಹೊಡಿ ಬಡಿ ಚಿತ್ರಗಳ ಭರಾಟೆಯ ನಡುವೆ ತಂಗಾಳಿ ತೀಡಿದಂತೆ ಇಂಥಾ ಅಚ್ಚುಕಟ್ಟಾದ ಸಿನಿಮಾಗಳು ರೂಪುಗೊಳ್ಳಬೇಕೆಂಬ ಆಶಯದೊಂದಿಗೇ ಅಶ್ವಥ್ ಈ ಚಿತ್ರದ ಭಾಗವಾಗಿದ್ದಾರಂತೆ.
ಸಿಂಹರೂಪಿಣಿ ಎಂಬುದೇ ಸ್ತ್ರೀ ಶಕ್ತಿಯ ಸಂಕೇತ. ಅದು ಹೆಣ್ತನದ ಘನತೆ, ಗೌರವದ ರೂಪಕವೂ ಹೌದು. ಪ್ರಸ್ತುತ ಸಮಾಜಕ್ಕೆ ಹೆಣ್ಣಿನ ಅಸಲೀ ಶಕ್ತಿಯ ಅರಿವು ಮೂಡಿಸುವ ಇಂಥಾ ಸದಭಿರುಚಿಯ ಚಿತ್ರದ ಅವಶ್ಯಕತೆ ಇದೆ ಅನ್ನೊದು ಅಶ್ವಥ್ ಅವರ ಅಭಿಪ್ರಾಯ. ಇದೊಂದು ಭಿನ್ನ ಬಗೆಯ ಚಿತ್ರವಾದ್ದರಿಂದ, ತಮ್ಮ ಪಾತ್ರದ ಬಗ್ಗೆ ಅಡಿಗಡಿಗೆ ಅಶ್ವಥ್ ನಿರ್ದೇಶಕರ ಬಳಿ ಪ್ರಶ್ನೆ ಮಾಡುತ್ತಿದ್ದರಂತೆ. ಪದೇ ಪದೆ ಸಣ್ಣ ಸಣ್ಣ ವಿಚಾರಗಳನ್ನೂ ಕೆದಕುತ್ತಾ, ಎಲ್ಲ ಸ್ಪಷ್ಟವಾದ ನಂತರವೇ ಕ್ಯಾಮೆರಾ ಮುಂದೆ ನಿಂತಿದ್ದರಂತೆ. ಇದೆಲ್ಲವೂ ಚಿತ್ರ ತಂಡದ ಪಾಲಿಗೆ ಹೊಸಾ ಅನುಭವ ನೀಡಿತ್ತು. ಆದರೆ ಒಟ್ಟಾರೆಯಾಗಿ ಆ ಪಾತ್ರ ತೆರೆ ಮೂಡಿಬಂದ ರೀತಿ ಕಂಡು ನಿರ್ದೇಶಕ ಕಿನ್ನಾಳ್ ರಾಜ್ ಸೇರಿದಂತೆ ಇಡೀ ಚಿತ್ರತಂಡ ಖುಷಿ ಪಟ್ಟಿತ್ತಂತೆ. ಈ ಬಗ್ಗೆ ವೇದಿಕೆಯಲ್ಲಿಯೇ ನಿರ್ದೇಶಕರು ಮೆಚ್ಚುಗೆಯ ಮಾತಾಡಿದ್ದರಂತೆ. ಪ್ರಶ್ನೆಗಳ ಮೂಲಕವೇ ಹೊಳಪುಗಟ್ಟಿಕೊಂಡ ಈ ಪಾತ್ರ ಪ್ರೇಕ್ಷಕರ ಮುಂದೆ ತೆರೆದುಕೊಂಡಿದೆ.
ಇದುವರೆಗೂ ಹತ್ತತ್ತಿರ ಮುನ್ನೂರು ಸಿನಿಮಾಗಳಲ್ಲಿ ನಟಿಸಿದ ಅನುಭವ ಹೊಂದಿರುವವರು ನೀನಾಸಂ ಅಶ್ವಥ್. ಇದುವರೆಗಿನ ಅವರ ಸಿನಿಮಾ ಗ್ರಾಫ್ ಅನ್ನೊಮ್ಮೆ ನೋಡಿದರೆ, ಪಾತ್ರಗಳಲ್ಲಿ ವೈವಿಧ್ಯತೆ ಎದ್ದು ಕಾಣಿಸುತ್ತದೆ. ಸದಾ ಹೊಸತನದ ಪಾತ್ರಗಳನ್ನೇ ಬಯಸುವ ಅಶ್ವಥ್ ಪಾಲಿಗೆ ಮಾರಮ್ಮ ದೇವಿಯ ಈ ಕಥಾನಕದಲ್ಲಿ, ದೇವಿಯ ತಂದೆಯ ಪಾತ್ರದಲ್ಲಿ ನಟಿಸೋ ಅವಕಾಶ ಒದಗಿ ಬಂದಿದೆ. ಇದುವರೆಗೂ ನಿರ್ವಹಿಸಿರುವ ವೈವಿಧ್ಯಮಯ ಪಾತ್ರಗಳಲ್ಲಿ, ಸಿಂಹರೂಪಿಣಿ ಚಿತ್ರದ ಪಾತ್ರವೂ ಸೇರಿಕೊಳ್ಳಲಿದೆ ಎಂಬ ನಂಬಿಕೆ, ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಹೊಸಾ ಅನುಭೂತಿ ನೀಡುತ್ತದೆಂಬ ಭರವಸೆ ಅವರಲ್ಲಿದೆ.