ಮಂಡ್ಯ: ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಶುಕ್ರವಾರ ನಾಗಮಂಗಲ ತಾಲೂಕಿನ ಸಂಕನಹಳ್ಳಿ ಬಳಿ ನಡೆದಿದ್ದ ಅಪಘಾತದಲ್ಲಿ 5 ಜನ ಮೃತಪಟ್ಟು 5 ಜನ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಬೆಳ್ಳೂರು ಕ್ರಾಸ್‍ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ನಿಖಿಲ್ ಮೃತರ ಕುಟುಂಬದವರು ಮತ್ತು ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ.
Advertisement
Advertisement
ಅಪಘಾತ ನಡೆದಿದ್ದು ಹೇಗೆ?
ಶುಕ್ರವಾರ ಸಂಜೆ ಆಟೋಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಐದು ಮಂದಿ ಮೃತಪಟ್ಟಿದ್ದರು. ಮೃತರನ್ನು ಮಂಡ್ಯ ಜಿಲ್ಲೆಯ ಸುಖದಾರೆ ಗ್ರಾಮದ ಕುಮಾರ್ (42), ಕಾಳೇನಹಳ್ಳಿಯ ಅರಸಮ್ಮ(40), ಆಟೋ ಡ್ರೈವರ್ ಸತೀಶ್(40), ಬೋರಲಿಂಗ(40) ಮತ್ತು ತಮಿಳುನಾಡಿನ ಸುರೇಶ್ ಎಂದು ಗುರುತಿಸಲಾಗಿದೆ.
Advertisement
ಮೃತರು ಹಾಗೂ ಗಾಯಾಳುಗಳೆಲ್ಲರೂ ಶುಕ್ರವಾರ ಸಂತೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನಾಗಮಂಗಲಕ್ಕೆ ಆಟೋದಲ್ಲಿ ಹೋಗಿದ್ದರು. ಬಳಿಕ ಕೆಲಸ ಮುಗಿಸಿಕೊಂಡು ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದರು. ಆದರೆ ಸಂಕನಹಳ್ಳಿ ಗೇಟ್ ಬಳಿ ಆಟೋ ಬರುತ್ತಿದ್ದಂತೆ ಎದುರಿನಿಂದ ಬಂದ ಟಿಪ್ಪರ್‍ಗೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಟಿಪ್ಪರ್ ನ ಕೆಳಗೆ ಸಿಲುಕಿದ್ದು, ಸುಮಾರು ಅರ್ಧ ಕಿಲೋ ಮೀಟರ್ ದೂರದವರೆಗೆ ಆಟೋವನ್ನು ಟಿಪ್ಪರ್ ಎಳೆದುಕೊಂಡು ಹೋಗಿದೆ. ಪರಿಣಾಮ ಟಿಪ್ಪರ್ ಕೆಳಗೆ ಸಿಲುಕಿದ ಆಟೋದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದರು.