– ನನಗೆ 76,000 ಜನ ಆಶೀರ್ವಾದ ಮಾಡಿದ್ದೀರಿ
– ಡಾ.ಮಂಜುನಾಥ್ ಅವರನ್ನು ರಾಜಕೀಯ ಹುಡುಕಿಕೊಂಡು ಬಂದಿದೆ
ರಾಮನಗರ: 2019ರ ಲೋಕಸಭಾ ಚುನಾವಣೆಯ ಸೋಲಿನ ನೋವು ಜನರಿಗಿದೆ. ನಾನು ಆಗ ರಾಜಕೀಯದಲ್ಲಿ ಏನೂ ಅರಿಯದವನು, ಆಗ ರಾಜಕೀಯದ ಷಡ್ಯಂತ್ರಕ್ಕೆ ಬಲಿಯಾದೆ. ನನ್ನ ವಿರುದ್ಧ ಗಿಫ್ಟ್ ಕಾರ್ಡ್ ಹಂಚಿ, ಮೋಸ ಮಾಡಿ ರಾಮನಗರದಲ್ಲಿ ಸೋಲಿಸಿದರು ಎಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕಣ್ಣೀರು ಹಾಕಿದ್ದಾರೆ. ನನ್ನ ಸೋಲಿಗೆ ಜನ ಉತ್ತರ ಕೊಡಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.
Advertisement
Advertisement
ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ನಾಮಪತ್ರ ಸಲ್ಲಿಕೆ ಬಳಿಕ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ವೇಳೆ, ನಮ್ಮ ತಂದೆಯವರ ಹೆಸರಲ್ಲಿ ಸಾಕಷ್ಟು ಜನ ಶಾಸಕರಾಗಿದ್ದಾರೆ. ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಯಾಕೆ ಸೋತರು ಎಂದು ಸಾಕಷ್ಟು ಜನ ಪ್ರಶ್ನೆ ಮಾಡ್ತಾರೆ. ನನಗೆ 76,000 ಜನ ಆಶೀರ್ವಾದ ಮಾಡಿದ್ದೀರಿ ಎಂದು ಅವರು ಭಾವುಕರಾಗಿದ್ದಾರೆ.
Advertisement
ಬೆಂಗಳೂರು ಗ್ರಾಮಾಂತರ ಕ್ಷೇತ್ರ 27 ಲಕ್ಷ ಮತದಾರರನ್ನು ಹೊಂದಿರುವ ದೊಡ್ಡ ಕ್ಷೇತ್ರ. ಡಾ.ಮಂಜುನಾಥ್‍ರವರ (Dr.C.N Manjunath) ವೈದ್ಯಕೀಯ ಸೇವೆ ಅಜರಾಮರ. ಕುಮಾರಣ್ಣ ಎರಡು ಬಾರಿ ಸಿಎಂ ಆಗಲು ರಾಮನಗರ ಜನತೆ ಕಾರಣ. ಕುಮಾರಣ್ಣ ನಿಮ್ಮ ಮನೆಮಗ, ಈ ಜೆಲ್ಲೆಯ ಜನ ನಮ್ಮ ಕುಟುಂಬಕ್ಕೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದೀರಿ. ಕೊನೆ ಉಸಿರು ಇರುವ ತನಕ ನಿಮ್ಮನ್ನು ಮರೆಯುವುದಿಲ್ಲ. ಮಂಡ್ಯದಲ್ಲಿ ಸ್ಥಳೀಯ ನಾಯಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದರು. ಅಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಕುಮಾರಣ್ಣ ನಿಲ್ಲುವಂತೆ ಒತ್ತಾಯ ಹೇರಲಾಯಿತು ಎಂದು ಅವರು ಹೇಳಿದ್ದಾರೆ.
Advertisement
ನನ್ನನ್ನು ಸ್ಪರ್ಧಿಸುವಂತೆ ಜನ ಒತ್ತಾಯ ಮಾಡಿದ್ದರು. ನಮ್ಮ ಪಕ್ಷವನ್ನ ಉಳಿಸಿ, ಕಟ್ಟಿ ಬೆಳೆಸಲು ನಾನು ಸ್ಪರ್ಧೆಯಿಂದ ದೂರ ಉಳಿದೆ. ನಾನು ಪಕ್ಷಕ್ಕಾಗಿ ಕಾರ್ಯಕರ್ತನ ರೀತಿ ಕೆಲಸ ಮಾಡುತ್ತೇನೆ. ನನ್ನ ಸೋಲು ಎರಡು ಬಾರಿ ಆಗಿದೆ. ನನಗೆ ನೋವಿದೆ, ನಾನು ಯಾರಿಗೆ ಅನ್ಯಾಯ ಮಾಡಿದ್ದೇನೆ? ದೇವರು ಯಾಕೆ ಹೀಗೆ ಮಾಡಿದ? ನಾನು ಸ್ಪರ್ಧೆ ಮಾಡುವುದಾದರೆ ರಾಮನಗರದಲ್ಲೇ ಮಾಡುತ್ತೇನೆ. ರಾಮನಗರ ಬಿಟ್ಟು ಎಲ್ಲೂ ಹೋಗಲ್ಲ. ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಸಜ್ಜನ ವ್ಯಕ್ತಿ. ಅಂಥವರು ರಾಜಕೀಯಕ್ಕೆ ಬೇಕು ಎಂದರು.
ಡಾ.ಮಂಜುನಾಥ್ ಅವರ ವೈದ್ಯಕೀಯ ಸೇವೆ ಎಲ್ಲರಿಗೂ ಚಿರಪರಿಚಿತ. ಅವರನ್ನು ನಿಲ್ಲಿಸಬೇಕು ಎಂದು ಕೇಂದ್ರದ ಬಿಜೆಪಿ (BJP) ನಾಯಕರು ಒತ್ತಾಯಿಸಿದ್ದರು. ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಆಗಬೇಕು ಎಂದು ಒಪ್ಪಿಸಿದ್ದು (H.D Kumaraswamy) ಕುಮಾರಣ್ಣ. ಅವರನ್ನು ಗೆಲ್ಲಿಸಬೇಕು ಎಂದು ಎಲ್ಲಾ ತೀರ್ಮಾನ ಮಾಡಿದ್ದಾರೆ. ಅವರು ರಾಜಕಾರಣವನ್ನು ಹಡುಕಿ ಬಂದಿಲ್ಲ, ರಾಜಕಾರಣವೇ ಅವರನ್ನು ಹುಡುಕಿಕೊಂಡು ಬಂದಿದೆ. ಇಲ್ಲಿ ಜನರಿಗೆ ಕುಕ್ಕರ್ ಸೀರೆ ಹಂಚಿ ರಾಜಕೀಯ ಮಾಡ್ತಿದ್ದಾರೆ. ಕಾಂಗ್ರೆಸ್ ನಾಯಕರು ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಇಲ್ಲಿನ ಸಂಸದರು ದೇಶವನ್ನು ವಿಭಜನೆ ಮಾಡುವ ಹೇಳಿಕೆ ಕೊಡ್ತಾರೆ. ಇಲ್ಲಿ ಎರಡು ವಿಚಾರ ಇದೆ. ಒಂದು ಕಡೆ ದುಡ್ಡು, ಮತ್ತೊಂದು ಕಡೆ ಮಾನವೀಯತೆ. ಯಾರನ್ನು ಗೆಲ್ಲಿಸಬೇಕು ಎಂದು ನೀವು ನಿರ್ಧಾರ ಮಾಡಿ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ.