ಬೆಂಗಳೂರು: ನಟ ದರ್ಶನ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ನಟ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ನಾನು ಪಾಂಡವರ ಕಡೆ ಇರುವವನು. ಆದ್ದರಿಂದ ನನಗೆ ದರ್ಶನ್ ಅವರೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸುವ ಅವಕಾಶ ಲಭ್ಯವಾಗಿಲ್ಲ. ಆದರೆ ನಾನು ದರ್ಶನ್ ಅವರೊಂದಿಗೆ ಒಟ್ಟಾಗಿ ಕುಳಿತುಕೊಂಡು ಸಿನಿಮಾ ಪ್ರಚಾರದಲ್ಲಿ ಭಾಗವಹಿಸಲು ಯಾವುದೇ ಅಭ್ಯಂತರವಿಲ್ಲ. ಖಂಡಿತ ಇಬ್ಬರೂ ಒಟ್ಟಿಗೆ ಕುರುಕ್ಷೇತ್ರ ಪ್ರಚಾರದಲ್ಲಿ ಭಾಗವಹಿಸುತ್ತೇವೆ ಎಂದರು.
ಚುನಾವಣೆಯ ಬಳಿಕ ದರ್ಶನ್ ಹಾಗೂ ನಿಖಿಲ್ ಸಿನಿಮಾ ಪ್ರಚಾರದಲ್ಲಿ ಭಾಗಹಿಸುತ್ತಿಲ್ಲ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿ ಮಾತನಾಡಿದ ಅವರು, ನನ್ನ ವಿರುದ್ಧ ಮೊದಲು ಕುರುಕ್ಷೇತ್ರಕ್ಕೆ ಡಬ್ಬಿಂಗ್ ಮಾಡಿಲ್ಲ ಎಂಬ ಆರೋಪ ಕೇಳಿ ಬಂತು. ಆದರೆ ಅಭಿಮನ್ಯು ಪಾತ್ರಕ್ಕೆ ನಾನೇ ಧ್ವನಿ ನೀಡಿದ್ದೇನೆ ಎಂದರು.
ಇಂತಹ ಐತಿಹಾಸಿಕ ಸಿನಿಮಾ ನಿರ್ಮಾಣ ಮಾಡಲು ಮುಂದೇ ಬಂದ ನಿರ್ಮಾಪಕರಿಗೆ ನಾನು ಧನ್ಯವಾದ ಹೇಳುತ್ತೇನೆ. ನಿನ್ನೆಯಷ್ಟೇ ಮುನಿರತ್ನ ಅವರು ಕರೆ ಮಾಡಿ ಪ್ರಚಾರ ಮಾಡಿದರೆ ಸಂತೋಷವಾಗುತ್ತದೆ ಎಂದಿದ್ದರು. ನಾನು ಪ್ರಚಾರಕ್ಕೆ ಬರುತ್ತೇನೆ ಎಂದು ಹೇಳಿದೆ. ಕುರುಕ್ಷೇತ್ರ ಪತ್ರಿಕಾಗೋಷ್ಠಿಯಲ್ಲಿ ದರ್ಶನ್ ಅವರು ಕೂಡ ಈ ಬಗ್ಗೆ ಮಾತನಾಡಿರುವುದನ್ನು ಗಮನಿಸಿದ್ದೇನೆ. ಸಿನಿಮಾದಲ್ಲಿ ನಾನು ಪಾಂಡವರ ಕಡೆ ಇರುತ್ತೇನೆ. ಆದ್ದರಿಂದ ದರ್ಶನ್ ಅವರೊಂದಿಗೆ ಪಾತ್ರ ಮಾಡಲು ಆಗಲಿಲ್ಲ. ಆದರೆ ದರ್ಶನ್, ನನ್ನ ನಡುವೆ ಏನೋ ನಡೆದಿದೆ ಎಂದು ಸುದ್ದಿಯಾಗುತ್ತಿದೆ. ಆದರೆ ಈ ರೀತಿ ನಮ್ಮ ನಡುವೆ ಏನೂ ಆಗಿಲ್ಲ. ದರ್ಶನ್ ಅವರು ನಾನು ಒಟ್ಟಾಗಿ ಪ್ರಚಾರ ಮಾಡುತ್ತೇವೆ ಎಂದರು.
ನಮ್ಮ ತಂದೆಯವರೂ ಕೂಡ ಸಿನಿಮಾ ಕ್ಷೇತ್ರದಿಂದಲೇ ಬಂದಿದ್ದಾರೆ. ಆದ್ದರಿಂದ ನಾನು ಸಿನಿಮಾದ ಪ್ರಚಾರದಲ್ಲಿ ಕೆಲ ಜವಾಬ್ದಾರಿಗಳನ್ನು ಹೊಂದಿದ್ದೇನೆ. ಅದನ್ನು ಪೂರೈಸುತ್ತೇನೆ. ನನ್ನದೇ ಒಂದು ಗುರುತು ಬೇಕು ಎಂಬ ಕಾರಣಕ್ಕೆ, ಏನಾದರು ಸಾಧನೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿಯೇ ನಾನು ಸಿನಿಮಾ ಕ್ಷೇತ್ರಕ್ಕೆ ಬಂದೆ. ಈಗ ಜೆಡಿಎಸ್ ಯುವ ಘಟಕದ ಜವಾಬ್ದಾರಿಯೂ ಸಿಕ್ಕಿದೆ. ಆದ್ದರಿಂದ ಇಷ್ಟಪಟ್ಟು ಎರಡು ಕಾರ್ಯಗಳನ್ನು ಮಾಡುತ್ತೇನೆ. ಕುರುಕ್ಷೇತ್ರ ಒಂದು ಐತಿಹಾಸಿಕ ಸಿನಿಮಾ ಆಗಿರುವುದರಿಂದ ಎಲ್ಲರೂ ಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಇದೇ ಸಂದರ್ಭದಲ್ಲಿ ಅಭಿಮಾನಿಗಳಲ್ಲಿ ಮನವಿ ಮಾಡಿದರು.