ದರ್ಶನ್ 50ನೇ ಸಿನಿಮಾದಲ್ಲಿ ನಟಿಸಿದ್ದಕ್ಕೆ ಖುಷಿ ಇದೆ: ನಿಖಿಲ್ ಕುಮಾರಸ್ವಾಮಿ

Public TV
1 Min Read
Nikhil 1

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾದಲ್ಲಿ ನಟಿಸಿದ್ದಕ್ಕೆ ನನಗೂ ಖುಷಿ ಇದೆ ಎಂದು ನಟ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ದರ್ಶನ್ ನನಗಿಂತ ಹಿರಿಯ ಕಲಾವಿದರು. ನನ್ನ ಮತ್ತು ಅವರ ನಡುವೆ ಏನೂ ಮನಸ್ತಾಪವಿಲ್ಲ. ಈ ರೀತಿಯ ಸುದ್ದಿಗಳೆಲ್ಲಾ ಹೇಗೆ ಹುಟ್ಟಿಕೊಳ್ಳುತ್ತೇವೆ ಎನ್ನುವುದೇ ಗೊತ್ತಾಗುತ್ತಿಲ್ಲ. ಸಿನಿಮಾದಲ್ಲಿ ನಾನು ಮತ್ತು ದರ್ಶನ್ ಮುಖಾಮುಖಿಯಾಗಿಲ್ಲ. ಅರ್ಜುನ ಪಾತ್ರಧಾರಿ ಸೋನು ಸೂದ್ ಜೊತೆಗೆ ಹೆಚ್ಚು ಕಾಣಿಸಿಕೊಂಡಿದ್ದೇನೆ. ನಾವಿಬ್ಬರು ಜೊತೆಯಾಗಿ ನಟಿಸಬೇಕೆಂದು ಮಹಾಭಾರತದ ಕಥೆಯನ್ನು ಬದಲಿಸಲು ಆಗಲ್ಲ. ಬೇಕಾದ್ರೆ ಮುಂದೆ ಇಬ್ಬರು ಜೊತೆಯಾಗಿ ನಟಿಸಬಹುದು ಎಂದರು.

ನಾನು ಸಂಬಂಧಗಳಿಗೆ ಮತ್ತು ಜೀವನದ ಮೌಲ್ಯಗಳಿಗೆ ಹೆಚ್ಚು ಬೆಲೆಯನ್ನು ನೀಡುತ್ತೇನೆ. ಸಿನಿಮಾ ಉದ್ಯಮದಲ್ಲಿ ನಾನು ಕೆಲವರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿದ್ದೇನೆ. ವೈಯಕ್ತಿಕ ಹಿತಾಸಕ್ತಿಗಾಗಿ ಸಿನಿಮಾ ಆಡಿಯೋ ಕಾರ್ಯಕ್ರಮಕ್ಕೆಲ್ಲ ಅವರನ್ನು ಕರೆತರಲು ಇಷ್ಟಪಡುವ ವ್ಯಕ್ತಿ ನಾನಲ್ಲ. ದರ್ಶನ್ ಅವರು ನನಗಿಂತ ಹಿರಿಯ ಕಲಾವಿದರು, 50 ಚಿತ್ರಗಳನ್ನು ನೀಡಿದ್ದಾರೆ. ಕಿರಿಯ ಕಲಾವಿದನಾಗಿ ನಾನು ಅವರಿಗೆ ಗೌರವ ಕೊಡುತ್ತೇನೆ ಎಂದು ತಿಳಿಸಿದರು.

Nikhil Kurukshetra 21 1000x406

ಕೋರಮಂಗಲದಲ್ಲಿ ನಡೆದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಬೇಕಿತ್ತು. ಆದ್ರೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಗೈರಾದೆ. ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಯಾವುದೇ ಕಾರ್ಯಕ್ರಮಕ್ಕೂ ಕರೆದರೂ ಹೋಗುತ್ತೇನೆ ಎಂದು ಆಡಿಯೋ ರಿಲೀಸ್ ಕಾರ್ಯಕ್ರಮದ ಗೈರಿಗೆ ಸ್ಪಷ್ಟನೆ ನೀಡಿದರು.

ರಾಮನಗರದ ಕರಗ ಕಾರ್ಯಕ್ರಮದಲ್ಲಿ ದರ್ಶನ್ ಅವರ ಹಾಡುಗಳಿಗೆ ನಿಷೇಧ ಹಾಕಲಾಗಿತ್ತು ಎಂಬ ವಿಷಯ ನನ್ನ ಗಮನಕ್ಕೂ ಬಂದಿದೆ. ಈ ರೀತಿ ಹಾಡುಗಳನ್ನು ನಿಷೇಧಿಸುವಂತೆ ಸಣ್ಣ ಮನಸ್ಸು ನಮಗಿಲ್ಲ. ಬೇಕಾದ್ರೆ ಈ ಬಗ್ಗೆ ಮಾಧ್ಯಮಗಳು ಹೇಳುವ ವ್ಯಕ್ತಿಯಿಂದ ಸ್ಪಷ್ಟನೆ ಕೊಡಿಸಲು ಸಿದ್ಧನಿದ್ದೇನೆ. ನಮ್ಮ ತಂದೆ ಕುಮಾರಣ್ಣವರು ರಾಜಕೀಯಕ್ಕೆ ಬರುವ ಮೊದಲು ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ ಸಿನಿಮಾ ಉದ್ಯಮಕ್ಕೆ ನಮ್ಮ ಕುಟುಂಬದಿಂದಲೂ ಸಣ್ಣ ಪುಟ್ಟ ಕೊಡುಗೆಗಳಿವೆ. ತಂದೆಯವರು 200 ರಿಂದ 250 ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. ಇಷ್ಟು ಸಣ್ಣತನ ನಮ್ಮಲ್ಲಿ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *