ಬೆಂಗಳೂರು: ಸಚಿವರ ಹನಿಟ್ರ‍್ಯಾಪ್ ಕೇಸ್‌ನ ಟೀಸರ್‌ನಲ್ಲಿ ಒಂದು ತೋರಿಸಿ, ಸಿನಿಮಾವನ್ನು ಬೇರೆಯದ್ದೇ ರೀತಿಯಲ್ಲಿ ತೋರಿಸುವ ಕೆಲಸ ಆಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆರೋಪ ಮಾಡಿದ್ದಾರೆ.
ಹನಿಟ್ರ‍್ಯಾಪ್ ಕೇಸ್ (HoneyTrap Case) ಸಂಬಂಧ ಜೆಡಿಎಸ್ (JDS) ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಸಚಿವರೇ ಸದನದ ಒಳಗೆ ಹನಿಟ್ರ‍್ಯಾಪ್ ಬಗ್ಗೆ ಆರೋಪ ಮಾಡಿದ್ದರು. ಈಗ ಅವರ ಮಗ ಕೊಲೆ ಕೇಸ್ ಬಗ್ಗೆ ಆರೋಪ ಮಾಡಿದ್ದಾರೆ. ಇದೆಲ್ಲವನ್ನೂ ರಾಜ್ಯದ ಜನರಿಗೆ ಬಿಡುತ್ತೇನೆ. ಮೊದಲು ಸಿನಿಮಾ ಟೀಸರ್ ತೋರಿಸಿದರು. ಆದರೆ ಒಳಗೆ ಸಿನಿಮಾ ಬೇರೆಯೇ ಆಗಿದೆ. ಅದೇನು ಅಂತ ಅವರಿಗೆ ಬಿಡುತ್ತೇನೆ. ಹನಿಟ್ರ‍್ಯಾಪ್ ಪ್ರಜಾಪ್ರಭುತ್ವಕ್ಕೆ ಮಾರಕ. ವಿಧಾನಸೌಧದಲ್ಲಿ ಹನಿಟ್ರ‍್ಯಾಪ್ ಬಗ್ಗೆ ಪ್ರಸ್ತಾಪ ಆಗುವುದು ಅತ್ಯಂತ ಮಾರಕವಾದ ವಿಚಾರ. ಯಾವುದೋ ಸ್ಥಾನದ ಮೇಲೆ ಅಪೇಕ್ಷೆ ಇಟ್ಟವರು ಹೀಗೆ ಅಡ್ಡದಾರಿ ಹಿಡಿದಿದ್ದಾರೆ. ವಾಮಮಾರ್ಗದಲ್ಲಿ ತೇಜೋವಧೆ ಮಾಡೋದು ಸರಿಯಲ್ಲ. ಇದು ಸಮಾಜಕ್ಕೆ ಮಾರಕ ಎಂದು ತಿಳಿಸಿದರು.ಇದನ್ನೂ ಓದಿ:ಸಿದ್ದರಾಮಯ್ಯಗೂ ಔರಂಗಜೇಬ್‌ಗೂ ಯಾವುದೇ ವ್ಯತ್ಯಾಸ ಇಲ್ಲ: ಹರೀಶ್ ಪೂಂಜಾ
ಹನಿಟ್ರ‍್ಯಾಪ್ ಯಾರು ಮಾಡಿದ್ದಾರೆ ಎಂದು ಸರ್ಕಾರ ನಡೆಸುತ್ತಿರುವವರು ಹೇಳಬೇಕು. ಪಾರದರ್ಶಕವಾಗಿ ತನಿಖೆ ಮಾಡಿ ಸರ್ಕಾರ ಹನಿಟ್ರ‍್ಯಾಪ್ ಬಗ್ಗೆ ಜನರ ಮುಂದೆ ಇಡಲಿ. ಪ್ರಭಾವಿ ಸಚಿವರಿಗೆ ಹನಿಟ್ರ‍್ಯಾಪ್ ಆಗಿದೆ. ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಅವರೇ ಸರ್ಕಾರ ನಡೆಸುತ್ತಿದ್ದಾರೆ. ಅವರೇ ತನಿಖೆ ಮಾಡಿ ಸತ್ಯಾಸತ್ಯಾತೆ ಹೊರಗೆ ಇಡಲಿ ಎಂದು ಆಗ್ರಹಿಸಿದರು.
ಹನಿಟ್ರ‍್ಯಾಪ್ ಕೇಸ್‌ನ ತನಿಖೆ ನಿಧಾನವಾಗುತ್ತಿದೆ. ಸರ್ಕಾರ 2 ವರ್ಷಗಳಲ್ಲಿ ವಿರೋಧ ಪಕ್ಷದವರನ್ನ ಮುಗಿಸಲು ಯಾವ ಮಟ್ಟಕ್ಕೆ ಬೇಕಾದರೂ ಇಳಿದು ಕೆಲಸ ಮಾಡಿದೆ. ಆದರೆ ಹನಿಟ್ರ‍್ಯಾಪ್ ಕೇಸ್‌ನಲ್ಲಿ ಯಾಕೆ ತನಿಖೆ ನಿಧಾನವಾಗುತ್ತಿದೆ. ಸಿಟಿ ರವಿ (CT Ravi) ಕೇಸ್‌ನಲ್ಲಿ ಅಷ್ಟೊಂದು ಆಸಕ್ತಿವಹಿಸಿ ಏನೇನೋ ಮಾಡಿದರು. ಅವರೇನು ಭಯೋತ್ಪಾದಕರಾ? ಅಷ್ಟೊಂದು ಹೈಡ್ರಾಮಾ ಮಾಡೋಕೆ? ಆದರೆ ಹಾಗೆ ಎಂಎಲ್‌ಸಿ (MLC) ಒಬ್ಬರನ್ನ ನಡೆಸಿಕೊಂಡಿದ್ದು ಸರಿಯಲ್ಲ. ವಿಪಕ್ಷಗಳನ್ನು ಹಾಗೇ ನಡೆಸಿಕೊಳ್ಳುವವರು, ಸಚಿವರ ಮೇಲೆ ಆರೋಪ ಮಾಡಿದರೆ ಯಾಕೆ ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ:1 ಮುತ್ತಿಗೆ 50 ಸಾವಿರ, ಫುಲ್ ಕೋ ಆಪರೇಷನ್‌ಗೆ 15 ಲಕ್ಷ – ಟೀಚರಮ್ಮನ 1 ಮುತ್ತಿನ ಕಥೆ ಓದಿ