ರಾಯಚೂರು: ರಾಜ್ಯ ಸರ್ಕಾರದಲ್ಲಿನ ಸಚಿವರು ಕುರ್ಚಿಗಾಗಿ ಒಬ್ಬ ಶಾಸಕರಿಗೆ 50 ಕೋಟಿ ರೂ. ಕೊಡಲು ಸಿದ್ದರಿದ್ದಾರೆ. ಆದರೆ ಸರ್ಕಾರಕ್ಕೆ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಅಳವಡಿಕೆಗೆ 52 ಕೋಟಿ ರೂ. ಕೊಡಲು ಇಚ್ಛಾಶಕ್ತಿಯಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.
ರಾಯಚೂರಿನ ಸಿಂಧನೂರಿನಲ್ಲಿ ಭತ್ತದ ಎರಡನೇ ಬೆಳೆಗೆ ತುಂಗಭದ್ರಾ ಡ್ಯಾಂನಿಂದ ನೀರು ಬಿಡಲು ಆಗ್ರಹಿಸಿ ನಡೆದ ಹೋರಾಟ ವೇಳೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳಲ್ಲಿ 17 ಗೇಟ್ ದುರಸ್ತಿಗೆ ಬಂದಿವೆ. ಒಂದು ಟಿಎಂಸಿ ಹೂಳು ತೆಗೆದ್ರೆ 25 ಸಾವಿರ ಟ್ರಕ್ ಲೋಡ್ ಆಗುತ್ತೆ, ಹೀಗಾಗಿ ಅದು ಕಷ್ಟ ಸಾಧ್ಯ. ಸದ್ಯ 80 ಟಿಎಂಸಿ ನೀರು ಜಲಾಶಯದಲ್ಲಿದೆ, ಎರಡನೇ ಬೆಳೆಗೆ ನೀರು ಕೊಡಬಹುದು. ಆದ್ರೆ ಸರ್ಕಾರ ಕಟ್ಟುನಿಟ್ಟಾಗಿ ಕೊಡಲು ಆಗಲ್ಲ ಅಂತ ಹೇಳಿದೆ. ಕ್ರಸ್ಟ್ಗೇಟ್‌ಗಳ ದುರಸ್ತಿಗೆ 52 ಕೋಟಿ ರೂ. ಟೆಂಡರ್ ಆಗಿದೆ. ಆದ್ರೆ 19ನೇ ಗೇಟ್ ರಿಪೇರಿಯ 1.19 ಕೋಟಿ ರೂ. ಹಣ ಇನ್ನೂ ಪಾವತಿ ಆಗಿಲ್ಲ, ಸಚಿವರು ಕುರ್ಚಿಗಾಗಿ ಒಬ್ಬ ಶಾಸಕರಿಗೆ 50 ಕೋಟಿ ರೂ. ಕೊಡಲು ಸಿದ್ದರಿದ್ದಾರೆ. ಆದರೆ ಸರ್ಕಾರ ಬಳಿ ಕೊಡಲು ಹಣವಿಲ್ಲ ಅಂತ ಆರೋಪಿಸಿದರು.ಇದನ್ನೂ ಓದಿ: ಕೆಜಿಎಫ್, ಕಾಂತಾರದಂತಹ ಸಿನಿಮಾ ಮಾಡಬೇಕೆಂಬ ಆಸೆ ನನಗಿದೆ: ನೀನಾಸಂ ಸತೀಶ್
ಸರ್ಕಾರದ್ದು ದಪ್ಪ ಚರ್ಮ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ. ಹೀಗಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತೆ. ಚಳಿಗಾಲದ ಅಧಿವೇಶನದಲ್ಲಿ ನಮ್ಮ ಶಾಸಕರು ಈ ಬಗ್ಗೆ ಗಂಭೀರವಾಗಿ ಧ್ವನಿ ಎತ್ತುತ್ತಾರೆ. ಎರಡನೇ ಬೆಳೆಗೆ ನೀರು ಹರಿಸಬೇಕು ಅಥವಾ ಸಾಲಮನ್ನಾ ಮಾಡಬೇಕು. ಇಲ್ಲ ಎಕರೆಗೆ 25 ಸಾವಿರ ರೂ ಪರಿಹಾರ ಕೊಡಬೇಕು. ಮೂರರಲ್ಲಿ ಒಂದಾದ್ರೂ ಮಾಡಬೇಕು, ಇಲ್ಲದಿದ್ರೆ ಟಿಬಿ ಡ್ಯಾಂಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಆರು ತಿಂಗಳಲ್ಲಿ ನಿರೀಕ್ಷೆಗೂ ಮೀರಿ ರಾಜಕೀಯ ಬದಲಾವಣೆ ಕುರಿತ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಅನಿರೀಕ್ಷಿತ ಬೆಳೆವಣಿಗೆ ಕುರಿತು ಹೇಳಿದ್ದಾರೆ ಅಷ್ಟೇ. ಬೆಳವಣಿಗೆಗಳನ್ನ ಸ್ವಾಭಾವಿಕವಾಗಿ ನೋಡಿದಾಗ ಬದಲಾವಣೆ ಆಗಬಹುದು. ಆಗೇ ಆಗುತ್ತೆ ಅಂತಲ್ಲ ಆಗಬಹುದು ಅಂತ ಹೇಳಿದ್ದಾರೆ. ಕಾಂಗ್ರೆಸ್ ಮನಸ್ಥಿತಿ ಕೊನೆ ಕ್ಷಣದವರೆಗೂ ಫೈಲ್‌ಗೆ ಸಹಿ ಮಾಡಿ, ಕಮಿಷನ್ ಪಡೆಯುವ ಮನಸ್ಥಿತಿಯಿದೆ. ಖರ್ಚಿಗಾಗಿ ಶಾಸಕರನ್ನ ಕೊಂಡುಕೊಳ್ಳುವ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿದೆ ಎಂದು ಹೇಳಿದರು.ಇದನ್ನೂ ಓದಿ: ಒಂದೇ ಗ್ರಾಮದ 8 ಯುವಕರು ಅಗ್ನಿವೀರರಾಗಿ ಆಯ್ಕೆ

