– ನಿಮ್ಮ ಬಳಿ ದುಡ್ಡು ಇದೆಯೋ ಇಲ್ಲವೋ ಹೇಳಿಬಿಡಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಗ್ಯಾರಂಟಿ ವಿಚಾರದಲ್ಲಿ ಕೊಟ್ಟ ಮಾತು ತಪ್ಪಿದೆ. ಗ್ಯಾರಂಟಿಗಳಿಗೆ ಪ್ರತಿ ತಿಂಗಳು ಹಣವನ್ನ ಯಾವಾಗ ಹಾಕ್ತೀರಾ ಅಂತ ಒಂದು ದಿನಾಂಕ ನಿಗದಿ ಮಾಡಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಗ್ರಹಿಸಿದ್ದಾರೆ.
ತಮ್ಮ ಜೆ.ಪಿ ನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೊಟ್ಟ ಮಾತಿನಂತೆ ಕೃಷಿ ಸಮ್ಮಾನ್ ಯೋಜನೆ ಹಣವನ್ನ ರೈತರ ಖಾತೆಗೆ ಪ್ರತಿ ತಿಂಗಳು ಹಾಕ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಯಾಕೆ ಕೊಟ್ಟ ಮಾತು ಉಳಿಸಿಕೊಂಡು ಪ್ರತಿ ತಿಂಗಳು ದುಡ್ಡು ಹಾಕುತ್ತಿಲ್ಲ ಅಂತ ಪ್ರಶ್ನೆ ಮಾಡಿದ್ರು.
ಸಿಎಂ ಸಿದ್ದರಾಮಯ್ಯ (Siddaramaiah) ಸೇರಿ ಈ ಸರ್ಕಾರದಲ್ಲಿ ಇರೋ ಎಲ್ಲರೂ ನಾವು ನುಡಿದಂತೆ ನಡೆಯುತ್ತೇವೆ… ನಡೆಯುತ್ತಿದ್ದೇವೆ ಅಂತೀರಾ… ನೀವು ನುಡಿದಿದ್ದು ಏನು? ನಡೆಯುತ್ತಿರೋದು ಏನು? ಅಂತ ಪ್ರಶ್ನೆ ಮಾಡಿದ ನಿಖಿಲ್, ನಾವೇ ಈ ವರ್ಷ ಕ್ಯಾಲೆಂಡರ್ ನಾವೇ ತರುತ್ತೇವೆ. ಯಾವ ದಿನಾಂಕದಂದು ಈ ಎಲ್ಲಾ ಯೋಜನೆ ಹಣ ಪೂರೈಸುತ್ತೀರಾ ಅಂತ ದಿನಾಂಕ ನಿಗದಿ ಮಾಡಿ ಅಂತ ಸರ್ಕಾರವನ್ನ ಆಗ್ರಹಿಸಿದ್ರು.
ದುಡ್ಡು ಇದೆಯೋ ಇಲ್ಲವೋ ಹೇಳಿ ಬಿಡಿ:
ನಿಮ್ಮ ಬಳಿ ದುಡ್ಡು ಇದೆಯೋ ಇಲ್ಲವೋ ಹೇಳಿ ಬಿಡಿ. 5 ಗ್ಯಾರಂಟಿಗಳಿಗೆ ಹಣ ಸರಿಯಾಗಿ ಕೊಡ್ತಿಲ್ಲ. ಕ್ಯಾಲೆಂಡರ್ ನಲ್ಲಿ ಒಂದು ದಿನಾಂಕವನ್ನ ನೀವೇ ನಿಗದಿ ಮಾಡಿ. ನೀವೇ ದಿನಾಂಕ ನಿಗದಿ ಮಾಡಿ ಗ್ಯಾರಂಟಿ ಹಣ ಹಾಕಿ. ಹಣ ಹೇಗೆ ಹೊಂದಿಸುತ್ತಿರೋ ಗೊತ್ತಿಲ್ಲ. ಒಂದು ದಿನ ನಿಗದಿ ಮಾಡಿ ಗ್ಯಾರಂಟಿ ಹಣ ಹಾಕಿ ಅಂತ ಆಗ್ರಹ ಮಾಡಿದ್ರು.
ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಅವರು ಚುನಾವಣೆ ಸಮಯದಲ್ಲಿ ಕಟಾ ಕಟ್ ಹಣ ಹಾಕಿಸ್ತೀವಿ ಎಂದರು. ಈಗ ಹಣ ಕಟಾ ಕಟ್ ಅಂತ ಬರುತ್ತಿಲ್ಲ. ಕಟ್ ಕಟ್ ಆಗುತ್ತಿದೆ. ಇಬ್ಬರು ನಾಯಕರು ಹೆಣ್ಣು ಮಕ್ಕಳಿಗೆ ಕಟಾ ಕಟ್ ಅಂತ ಹಣ ಹಾಕಿಸಬೇಕು ಅಂತ ಆಗ್ರಹ ಮಾಡಿದ್ರು. ಗ್ಯಾರಂಟಿ ಹಣದ ಬಗ್ಗೆ ಕಾಂಗ್ರೆಸ್ ನವರು ಉತ್ತರ ಕೊಡಬೇಕು. ಇಲ್ಲದೇ ಹೋದರೆ ಜನರ ಪರವಾಗಿ ಬೀದಿಗಿಳಿದು ಹೋರಾಟ ಮಾಡ್ತೀವಿ ಅಂತ ಸರ್ಕಾರಕ್ಕೆ ಎಚ್ಚರಿಕೆ ಕೊಟ್ರು.
ಇದೇ ವೇಳೆ ಸಚಿವರಿಂದ ಗ್ಯಾರಂಟಿ ಪರಿಷ್ಕರಣೆ ಮಾಡೋ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನುಡಿದಂತೆ ನಡೆಯೋ ಸಿಎಂ ಅವರು ಕಾಕಾ ಪಾಟೀಲ್, ಮಹದೇವಪ್ಪಗೂ ಫ್ರೀ ಅಂದರು. ಈಗ ಇವರು ಯೂಟರ್ನ್ ಹೊಡೆಯುತ್ತಿದ್ದಾರೆ. ನಮಗೆ ಅವರ ಗ್ಯಾರಂಟಿ ಬಗ್ಗೆ ಅಸೂಯೆ ಇಲ್ಲ. ಅವರು ಕೊಟ್ಟ ಮಾತು ಉಳಿಸಿಕೊಳ್ಳಲಿ. ಅದಕ್ಕೆ ನಾನು ಬಂದಿರೋದು. ಹೆಣ್ಣುಮಕ್ಕಳಿಗೆ ದ್ರೋಹ ಮಾಡಬೇಡಿ. ನಿಮ್ಮ ಭರವಸೆ ನೀವು ಈಡೇರಿಸಿ. ನಿಮ್ಮ ಬಳಿ ಹಣ ಇದೆಯಾ ಇಲ್ಲವಾ ಅಂತ ಹೇಳಲಿ. ಕೊಟ್ಟ ಮಾತು ಉಳಿಸಿಕೊಳ್ಳಲಿ ಅಂತ ಆಗ್ರಹಿಸಿದರು.