ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‍ನ ಅಟ್ಟಹಾಸ ಹಿನ್ನೆಲೆಯಲ್ಲಿ ನಿಗದಿಯಂತೆ ನಿಖಿಲ್ ಕುಮಾರಸ್ವಾಮಿ ಮದುವೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕುಟುಂಬ ಮುಂದಾಗಿದೆ ಎಂದು ತಿಳಿದುಬಂದಿದೆ.
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆ ಮುಹೂರ್ತ ಏಪ್ರಿಲ್ 17 ರಂದು ಫಿಕ್ಸ್ ಆಗಿತ್ತು. ರಾಮನಗರ ಹಾಗೂ ಚನ್ನಪಟ್ಟಣ ಮಧ್ಯೆ ಜಾನಪದ ಲೋಕದ ಬಳಿ ಅದ್ಧೂರಿಯಾಗಿ ಮದುವೆ ಮಾಡಲು ಕುಟುಂಬ ನಿರ್ಧರಿಸಿತ್ತು. ಆದರೆ ಕೊರೊನಾ ಅಟ್ಟಹಾಸದ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಪುತ್ರನ ವಿವಾಹ ಮುಹೂರ್ತವನ್ನು ಮುಂದೂಡಬೇಕಾ? ಅಥವಾ ನಿಗದಿಯಂತೆ ನೆರವೇರಿಸಬೇಕಾ? ಎಂಬ ಗೊಂದಲದಲ್ಲಿ ಕುಮಾರಸ್ವಾಮಿ ಕುಟುಂಬವಿತ್ತು. ಆದರೆ ಭಾನುವಾರ ದೇವೇಗೌಡರ ಕುಟುಂಬ ಅಂತಿಮ ನಿರ್ಧಾರ ತೆಗೆದುಕೊಂಡಿದೆ.
Advertisement
Advertisement
ತಂದೆ ದೇವೇಗೌಡರ ಜೊತೆಗೆ ನಿನ್ನೆ ಸಂಜೆ ಕುಮಾರಸ್ವಾಮಿ ವಿವಾಹದ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ. ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಯಾರನ್ನು ಮುಹೂರ್ತ ಕಾರ್ಯಕ್ಕೆ ಆಹ್ವಾನಿಸುವುದು ಬೇಡ. ಇಂತಹ ಸಂದರ್ಭದಲ್ಲಿ ಯಾವುದೇ ಸಭೆ, ಸಮಾರಂಭಗಳು ನಡೆಯಬಾರದು. ಕೊರೊನಾ ಹರಡುವಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಬಹಳ ಮುಖ್ಯವಾಗಿದೆ. ಸದ್ಯಕ್ಕೆ ನಾವು ರಾಮನಗರ ಹಾಗೂ ಚನ್ನಪಟ್ಟಣದ ಮಧ್ಯೆ ನಿಗದಿಯಂತೆ ವಿವಾಹ ನೆರವೇರಿಸಲು ಸಾಧ್ಯವಿಲ್ಲ. ಹೀಗಾಗಿ ಮನೆಯ ಮಟ್ಟಿಗೆ ಮದುವೆ ಕಾರ್ಯ ನೆರವೇರಿಸುವ ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement
Advertisement
ವಧು ರೇವತಿ ಅವರ ಮನೆಯಲ್ಲಿ ಎರಡು ಕುಟುಂಬಗಳ ಮುಖ್ಯ ಸದಸ್ಯರು ಮಾತ್ರ ಮದುವೆ ಕಾರ್ಯದಲ್ಲಿ ಭಾಗಿಯಾಗಲಿದ್ದು, 50 ಜನರೊಳಗೆ ಸೇರಿ ಮದುವೆ ಮುಹೂರ್ತ ನೆರವೇರಿಸುವ ತಿರ್ಮಾನಕ್ಕೆ ಬಂದಿದ್ದಾರೆ. ಅಲ್ಲದೇ ಲಾಕ್‍ಡೌನ್ ತೆರವಾದ ಬಳಿಕ ಪರಿಸ್ಥಿತಿ ನೋಡಿಕೊಂಡು ಆರತಕ್ಷತೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 17 ರಂದು ಒಳ್ಳೆಯ ಮುಹೂರ್ತ ಇದೆ. ಶ್ರೀ ಶಾರ್ವರೀನಾಮ ಸಂವತ್ಸರದ ಉತ್ತರಾಯಣದ ವಸಂತ ಋತುವಿನ ಚೈತ್ರಮಾಸದ ಕೃಷ್ಣ ಪಕ್ಷದ ದಶಮಿ ಒಳ್ಳೆಯ ಮುಹೂರ್ತ. ಇದನ್ನು ಬಿಟ್ಟರೆ ಶ್ರಾವಣ ಮಾಸದವರೆಗೂ ಕಾಯಬೇಕು. ಏಪ್ರಿಲ್ 17 ಬಿಟ್ಟರೆ ಮುಂದೆ ಮೂರ್ನಾಲ್ಕು ತಿಂಗಳು ಒಳ್ಳೆಯ ಮುಹೂರ್ತ ಇಲ್ಲ. ಹೀಗಾಗಿ ತಡ ಮಾಡುವುದು ಬೇಡ. ನಿಗದಿಯಂತೆ ಎರಡು ಕುಟುಂಬದ ಸದಸ್ಯರುಗಳ ಸಮ್ಮುಖದಲ್ಲಿ ಮದುವೆ ಮಾಡಿ ಮುಗಿಸೋಣ ಎಂಬ ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕುಮಾರಸ್ವಾಮಿ ವಧು ರೇವತಿ ಅವರ ಪೋಷಕರ ಬಳಿ ಈ ವಿಚಾರವನ್ನು ತಿಳಿಸಿದ್ದಾರೆ. ಹೀಗಾಗಿ ವಧು ರೇವತಿ ನಿವಾಸ ಜ್ಞಾನಭಾರತಿ ಬಡಾವಣೆಯಲ್ಲಿ ಏಪ್ರಿಲ್ 17 ರಂದು ನಿಗದಿಯಂತೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.