Connect with us

Bengaluru City

ಸಿನಿಮಾ ದಿನಗೂಲಿ ನೌಕರರಿಗೆ ನಿಖಿಲ್ ಸಹಾಯ ಹಸ್ತ

Published

on

ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದ್ದು, ಇದರ ಬಿಸಿ ಸಿನಿಮಾ ಕ್ಷೇತ್ರದ ದಿನಗೂಲಿ ನೌಕರರಿಗೂ ತಟ್ಟಿದೆ. ಇದನ್ನರಿತ ತೆಲುಗು, ತಮಿಳು ಕಲಾವಿದರು ಸಹಾಯಕ್ಕೆ ಮುಂದಾಗಿದ್ದು, ಸ್ಯಾಂಡಲ್‍ವುಡ್‍ನಲ್ಲಿಯೂ ಹಲವು ನಟ, ನಟಿಯರು ಸಹಾಯಕ್ಕೆ ಮುಂದಾಗಿದ್ದಾರೆ. ಇವರ ಸಾಲಿಗೆ ಇದೀಗ ನಿಖಿಲ್ ಕುಮಾರಸ್ವಾಮಿಯವರೂ ಸೇರಿಕೊಂಡಿದ್ದು, ಕಾರ್ಮಿಕರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.

ಹೌದು ಸದ್ದಿಲ್ಲದೆ ಸಹಾಯ ಮಾಡಲು ನಿಖಿಲ್ ಕುಮಾರಸ್ವಾಮಿ ಮುಂದಾಗಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರಂತೆ. ಸಿನಿಮಾ ಕ್ಷೇತ್ರದಲ್ಲಿ ಸಾವಿರಾರು ದಿನಗೂಲಿ ನೌಕರರಿದ್ದು, ಅವರೆಲ್ಲರೂ ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಹೀಗಾಗಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಇದನ್ನು ಮನಗಂಡ ಸ್ಯಾಂಡಲ್‍ವುಡ್‍ನ ಹಲವು ನಟರು ಸಹಾಯಕ್ಕೆ ಮುಂದಾಗಿದ್ದು, ಶಿವರಾಜ್‍ಕುಮಾರ್ ನೇತೃತ್ವದಲ್ಲಿ ಸಹಾಯ ಮಾಡಲು ತಂಡವನ್ನೇ ರಚಿಸಲಾಗಿದೆ. ಇತ್ತ ನಿಖಿಲ್ ಕುಮಾರಸ್ವಾಮಿಯವರು ಕಾರ್ಮಿಕರ ಖಾತೆಗೆ ನೇರವಾಗಿ ಹಣ ಹಾಕಲು ಮುಂದಾಗಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರಂತೆ.

ಯೂನಿಟ್ ಬಾಯ್ಸ್, ಮೇಕಪ್ ಬಾಯ್ಸ್, ಲೈಟ್ ಬಾಯ್ಸ್, ಫೈಟರ್ಸ್, ಸಹ ನೃತ್ಯಗಾರರು ಹೀಗೆ ಸಾಕಷ್ಟು ವಿಭಾಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಕಷ್ಟದಲ್ಲಿದ್ದಾರೆ. ಈ ಎಲ್ಲ ಕಾರ್ಮಿಕರಿಗೂ ಸಂಘಗಳಿದ್ದು, ಈ ಸಂಘಗಳ ಮೂಲಕ ಸಹಾಯ ಮಾಡಲು ಯೋಚಿಸಿದ್ದಾರೆ. ಮೇಕಪ್ ಮೆನ್ ಅಸೋಸಿಯೇಷನ್, ಫೈಟರ್ಸ್ ಅಸೋಸಿಯೇಷನ್, ಲೈಟ್ ಬಾಯ್ಸ್ ಅಸೋಸಿಯೇಷನ್, ಯುನಿಟ್ ಬಾಯ್ಸ್ ಅಸೋಸಿಯೇಷನ್, ಪ್ರೊಡಕ್ಷನ್ ಅಸೋಸಿಯೇಷನ್ ಹೀಗೆ ಸುಮಾರು 18 ಅಸೋಸಿಯೇಷನ್‍ಗಳಿದ್ದು, ಇವುಗಳಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಸಿನಿಮಾ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಅವರ ಖಾತೆಗಳಿಗೆ ನೇರವಾಗಿ ಹಣ ಹಾಕಲು ನಿಖಿಲ್ ಕುಮಾರಸ್ವಾಮಿ ನಿರ್ಧರಿಸಿದ್ದಾರಂತೆ.

ಈ ಕುರಿತು ನಿಖಿಲ್ ಆಪ್ತ ಸುನೀಲ್ ಮಾಹಿತಿ ಮಾಹಿತಿ ನೀಡಿದ್ದು, ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಎಲ್ಲರ ಖಾತೆಗೂ ಹಣ ಜಮೆಯಾಗಲಿದೆ. 3 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ತಲಾ ಒಂದು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಈ ಮೂಲಕ ಒಟ್ಟು 30 ಲಕ್ಷ ರೂ. ಹಣವನ್ನು ಕಾರ್ಮಿಕರಿಗಾಗಿ ನಿಖಿಲ್ ನೀಡುತ್ತಿದ್ದಾರೆ. ಇದನ್ನು ಸಂಘಟನೆಗಳ ಖಾತೆಗೆ ಹಾಕದೆ, ಈ ಅಸೋಸಿಯೇಷನ್‍ಗಳ ಮೂಲಕ ಎಲ್ಲ ಕಾರ್ಮಿಕರ ಮಾಹಿತಿ ಪಡೆಯಲಾಗಿದೆ. ಒಟ್ಟು 18 ಅಸೋಸಿಯೇಷನ್‍ಗಳಲ್ಲಿ ನೋಂದಾಯಿಸಿರುವ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in