– ರಾಜಕೀಯದಲ್ಲಿ ಜನರ ತೀರ್ಪೇ ಅಂತಿಮ
– ಮಾರ್ಚ್ 25ಕ್ಕೆ ನಾಮಪತ್ರ ಸಲ್ಲಿಕೆ
ಮಂಡ್ಯ: ತಂದೆಯಂತೆ ಗ್ರಾಮವಾಸ್ತವ್ಯ ಮಾಡುವ ಭರವಸೆ ನೀಡುತ್ತಿರುವ ನಿಖಿಲ್ ಕುಮಾರಸ್ವಾಮಿ ಸೋಲಲಿ ಗೆಲ್ಲಲಿ ಮಂಡ್ಯದಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ.
ಮಂಡ್ಯದ ಬಸರಾಳು ಹೋಬಳಿಯಲ್ಲಿ ಪ್ರಚಾರದ ನಡೆಸಿ ಮಾತನಾಡಿದ ಅವರು, ಜನರ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ನಾನು ಹೋದ ಕಡೆಯೆಲ್ಲಾ ತುಂಬಾ ಖುಷಿಯಿಂದ ಸ್ವಾಗತ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ತಾಲೂಕು ಮತ್ತು ಗ್ರಾಮಗಳಿಗೆ ಭೇಟಿ ಕೊಟ್ಟಿದ್ದೇನೆ. ಅವರು ಕುಮಾರಣ್ಣ ಮತ್ತು ದೇವೇಗೌಡರ ಮೇಲೆ ಇಟ್ಟಿರುವ ನಂಬಿಕೆಯನ್ನು ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳಬೇಕೆಂದು ಇಂದು ನಾನು ಹೆಜ್ಜೆ ಇಡುತ್ತಿದ್ದೇನೆ ಎಂದರು.
ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೆ. ಆದರೆ ನಮ್ಮ ಪಕ್ಷದ ವರಿಷ್ಠರು ಮತ್ತು ಕಾರ್ಯಕರ್ತರು ತೀರ್ಮಾನ ಮಾಡಿ ಗೊಂದಲ ಬೇಡ ಎಂದು 25 ರಂದೇ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೇವೆ. ಹೀಗಾಗಿ ನಾಮಪತ್ರ ಸಲ್ಲಿಕೆಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಬುಧವಾರ ಸುಮಲತಾ ಅಂಬರೀಶ್ ಅವರ ಬಹಿರಂಗ ಸಮಾವೇಶದಲ್ಲಿ ಕೇಳಿಬಂದ ಮಾತುಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಚುನಾವಣೆ ಸಮಯದಲ್ಲಿ ಟೀಕೆ ಮಾಡುವುದು ಸಹಜ. ಅದು ವೈಯಕ್ತಿಕವಾಗಿ ಯಾರ ಬಗ್ಗೆಯೂ ಟೀಕೆ ಮಾಡಲು ಹೋಗಬಾರದು ಎಂದು ನನ್ನ ಕಾರ್ಯಕರ್ತರು, ಶಾಸಕರಿಗೆ ಮತ್ತು ಮುಖಂಡರಿಗೆ ಮನವಿ ಮಾಡಿದ್ದೇನೆ. ರಾಜಕೀಯದಲ್ಲಿ ಜನರ ತೀರ್ಪೇ ಅಂತಿಮ ಎಂದು ತಿಳಿಸಿದರು.
ಚುನಾವಣೆಯಲ್ಲಿ ಸೋಲಲಿ ಗೆಲ್ಲಲಿ ಮಂಡ್ಯದಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ಮಂಡ್ಯ ಜಿಲ್ಲೆಯ ಜನರನ್ನು ಬಿಡಲು ಸಾಧ್ಯವಿಲ್ಲ. ನಮ್ಮ ಪಕ್ಷದ ಎಂಟು ಜನರು ಕುಳಿತು ತೀರ್ಮಾನ ಮಾಡಿ ನನಗೆ ಮಾರ್ಗದರ್ಶನ ನೀಡಿದ್ದಾರೆ. ದೇವರ ಅನುಗ್ರಹ ಇದ್ದರೆ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂಬ ನಂಬಿಕೆ ನಮಗಿರುವುದರಿಂದ ಸಹಜವಾಗಿ ಗ್ರಾಮಗಳಿಗೆ ಹೋದಾಗ ಪೂಜೆ ಸಲ್ಲಿಸುತ್ತೇನೆ ಎಂದು ನಿಖಿಲ್ ಹೇಳಿದರು.