ಮಂಡ್ಯ: ಸರ್ಕಾರ ನಡೆಯುತ್ತೋ ಇಲ್ಲವೋ ಎಂಬ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರು ಕಾರ್ಯಕರ್ತರ ಜೊತೆ ಚರ್ಚಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಸುನೀಲ್ ಗೌಡ ದಂಡಿಗಾನಹಳ್ಳಿ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸುಮಾರು 42 ಸೆಕೆಂಡ್‍ಗಳ ವಿಡಿಯೋದಲ್ಲಿ, ಒಮ್ಮೆ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಆತ್ಮವಿಶ್ವಾಸದಿಂದ ನಿಖಿಲ್ ಹೇಳುತ್ತಾರೆ. ನಂತರ ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ, ಜೆಡಿಎಸ್ ಕಾರ್ಯಕರ್ತರು ತಯಾರಾಗಿರಿ ಎಂಬರ್ಥದಲ್ಲಿ ಹೇಳಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಆದರೆ ಆದರೆ ಇದು ಯಾವಾಗ, ಎಲ್ಲಿ ಮಾತನಾಡಿರುವುದು ಎಂಬುದು ತಿಳಿದು ಬಂದಿಲ್ಲ. ವಿಡಿಯೋದಲ್ಲಿ “ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸರ್ಕಾರ ಕಂಪ್ಲೀಟ್ ಆಗುತ್ತದೆ. ದಿನ ನಿತ್ಯ ಮಾಧ್ಯಮದಲ್ಲಿ ಬರುವುದನ್ನು ನೋಡಿ ನೀವು ಟೆನ್ಷನ್ ಆಗಬೇಡಿ. ಒಳಗಡೆ ಏನು ಅನ್ನೋದು ನಮಗೆ ಗೊತ್ತಿದೆ. ಕುಮಾರಣ್ಣ ನಾಲ್ಕು ವರ್ಷ ನಡೆಸುತ್ತಾರೆ. ಮುಂದಿನ ತಿಂಗಳಿಂದಲೇ ಶುರು ಮಾಡಿ. ಒಂದು ವರ್ಷಕ್ಕೆ ಬರುತ್ತೋ, ಎರಡು ವರ್ಷಕ್ಕೆ ಬರುತ್ತೋ, ಮೂರು ವರ್ಷಕ್ಕೆ ಬರುತ್ತೋ ಗೊತ್ತಿಲ್ಲ. ಆದರೆ ನೀವು ರೆಡಿ ಇರಬೇಕು” ಎಂದು ಜೆಡಿಎಸ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ.