ಮಂಡ್ಯದಲ್ಲಿ ಜೆಡಿಎಸ್ ಹಬ್ಬ – ಸಾಗರದಂತೆ ಹರಿದು ಬಂದ ಜನರು

Public TV
2 Min Read
MND NIKIL RALLY copy

ಮಂಡ್ಯ: ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕಾರ್ಯಕ್ರಮವನ್ನು ಜೆಡಿಎಸ್ ಕಾರ್ಯಕರ್ತರು ಹಬ್ಬದಂತೆ ಸಂಭ್ರಮಿಸುತ್ತಿದ್ದು, ಸುಮಾರು ಎರಡು ಕಿಲೋ ಮೀಟರ್ ವರೆಗೂ ರ‍್ಯಾಲಿಯಲ್ಲಿ ಹೊರಟಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ನಿಖಿಲ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಮತ್ತು ಜೆಡಿಎಸ್ ಮುಖಂಡರ ಜೊತೆಗೆ ಕಾಳಿಕಾಂಬ ದೇವಸ್ಥಾನದ ಆವರಣದಿಂದ ರ‍್ಯಾಲಿ ಪ್ರಾರಂಭಿಸಿದ್ದು, ಡೊಳ್ಳು ಕುಣಿತ, ಪಟ ಕುಣಿತ, ಗೊಂಬೆ ಕುಣಿತಗಳ ಜೊತೆ ನಿಖಿಲ್ ಪ್ರಚಾರದ ರ‍್ಯಾಲಿ ಹೊರಟಿದೆ.

MND 1 2

ಸುಮಾರು ಎರಡು ಕಿಲೋ ಮೀಟರ್ ರ‍್ಯಾಲಿ ಹೋಗಲಿದ್ದು, ನಿಖಿಲ್ ಕುಮಾರಸ್ವಾಮಿ ಅವರು ತೆರೆದ ವಾಹನದಲ್ಲಿ ನಿಂತು ಕಾರ್ಯಕರ್ತರಿಗೆ ಕೈ ಬೀಸುತ್ತಿದ್ದಾರೆ. ನಿಖಿಲ್ ತೆರೆದ ವಾಹನ ಹಿಂದೆ, ಮುಂದೆ ಮತ್ತು ಅಕ್ಕ-ಪಕ್ಕದಲ್ಲಿ ಜನ ಸೇರಿದ್ದಾರೆ. ಎತ್ತ ನೋಡಿದರೂ ಬರೀ ಜನರೇ ಕಾಣಿಸುತ್ತಿದ್ದಾರೆ. ಬಿಸಿಲು ಎಂದು ನೋಡದೇ ಜನರು ನಿಖಿಲ್ ಎಂದು ಕೂಗುತ್ತಾ ಒಂದು ರೀತಿ ಮಂಡ್ಯದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ.

ರ‍್ಯಾಲಿಗಾಗಿ ಎರಡು ಲಾರಿ ಸಿದ್ಧತೆ ಮಾಡಿಕೊಂಡಿದ್ದು, ಜೆಡಿಎಸ್ ಬ್ಯಾನರ್ ನಿಂದ ಅಲಂಕಾರ ಮಾಡಲಾಗಿದೆ. ಲಾರಿ ಸುತ್ತ ಹಾಕಿರುವ ಬ್ಯಾನರ್ ನಲ್ಲಿ ನಿಖಿಲ್ ಕುಮಾರ್ ರಾರಾಜಿಸುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರ ಫೋಟೋ ಕೂಡ ಇದೆ. ಉಳುವ ಯೋಗಿಯ ನೋಡಲ್ಲಿ ಹಾಡಿಗೆ ಹಸಿರು ಸೀರೆ ಉಟ್ಟು, ಹೊರೆ ಹೊತ್ತ ಮಹಿಳೆಯರಿಂದ ನೃತ್ಯದ ಮೂಲಕ ಮನರಂಜನೆ ನೀಡಲಾಗುತ್ತಿದೆ.

vlcsnap 2019 03 25 14h41m28s071

ಭದ್ರತೆ:
ಭದ್ರತೆಗಾಗಿ ಒಬ್ಬರು ಎಸ್‍ಪಿ, 10 ಡಿವೈಎಸ್‍ಪಿ, 20 ಸಿಪಿಐ, 35 ಪಿಎಸ್‍ಐ, 800 ಜನ ಸಿಬ್ಬಂದಿ, 5 ಡಿಆರ್ ಸಿಬ್ಬಂದಿ ಮತ್ತು 5 ಕೆಎಸ್‍ಆರ್ ಪಿ ನಿಯೋಜನೆ ಮಾಡಲಾಗಿದೆ. ನಿಖಿಲ್ ನಾಮಪತ್ರ ಸಲ್ಲಿಕೆ ನಂತರ ಕಾವೇರಿ ಉದ್ಯಾನವನದ ಬಳಿ ಬೃಹತ್ ಬಹಿರಂಗ ಭಾಷಣ ಮಾಡಲಿದ್ದಾರೆ. ಬಹಿರಂಗ ಭಾಷಣ ವೀಕ್ಷಿಸಲು ಬೃಹತ್ ಎಲ್‍ಇಡಿ ಪರದೆ ಅಳವಡಿಕೆ ಮಾಡಲಾಗಿದೆ. ಸುಮಾರು ಹತ್ತು ಎಲ್‍ಇಡಿ ಅಳವಡಿಕೆ ಮಾಡಲಾಗಿದ್ದು, ಪಾರ್ಕ್ ಸುತ್ತ ಬ್ಯಾರಿಕೇಡ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಎದುರಿನ ಪಾರ್ಕ್ ನಲ್ಲಿ ನಿಖಿಲ್ ಫೋಟೋ ಹಿಡಿದು ಜಯಕಾರ ಕೂಗುತ್ತಾ ಜೆಡಿಎಸ್ ಕಾರ್ಯಕರ್ತರ ಸಂಭ್ರಮಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *