ಫಲಿತಾಂಶದ ಹೊಣೆಯನ್ನು ನಾನೇ ಹೊರುತ್ತೇನೆ: ನಿಖಿಲ್ ಮೊದಲ ಪ್ರತಿಕ್ರಿಯೆ

Public TV
2 Min Read
nikil kumaraswamy 1

ಬೆಂಗಳೂರು: ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ನಿಖಿಲ್ ಅವರು ಇನ್‍ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಸಂಪೂರ್ಣವಾಗಿ ಫಲಿತಾಂಶದ ಸೋಲು, ಮುಂದಿನ ನಡೆಯ ಬಗ್ಗೆ ತಿಳಿಸಿದ್ದಾರೆ.

ಅಭಿಗೆ ಶುಭಾಶಯ:
ನಾಳೆ(ಶುಕ್ರವಾರ) ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಚೊಚ್ಚಲ ‘ಅಮರ್’ ಸಿನಿಮಾ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತಿದ್ದೇನೆ. ಎಲ್ಲರೂ ದಯವಿಟ್ಟು ಥಿಯೇಟರ್ ಗಳಿಗೆ ಹೋಗಿ ‘ಅಮರ್’ ಚಿತ್ರವನ್ನು ನೋಡಿ. ಅಭಿ ಸಿನಿಮಾದಲ್ಲಿ ಚೆನ್ನಾಗಿ ಅಭಿನಯಿಸಿರುತ್ತಾರೆ ಎಂಬ ನಂಬಿಕೆ ಇದೆ ಎಂದು ಮೊದಲಿಗೆ ಅಭಿಷೇಕ್‍ಗೆ ವಿಶ್ ಮಾಡಿದ್ದಾರೆ.

NIKIL ABHISHEK

ಸುಮಕ್ಕಗೆ ಅಭಿನಂದನೆ:
ಕೆಲವರು ನಾನು ತೋರ್ಪಡಿಕೆಗಾಗಿ ವಿಶ್ ಮಾಡುತ್ತಿದ್ದೇನೆ ಅಂದುಕೊಳ್ಳುತ್ತಾರೆ. ಅಂತಹವರಿಗೆ ನಾನು ಹೇಳಲು ಇಷ್ಟಪಡುವುದೇನೆಂದರೆ, ಪ್ರಚಾರದ ಸಮಯದಲ್ಲೂ ನಾನು ಸಂಬಂಧಗಳಿಗೆ ಬೆಲೆ ಕೊಡುತ್ತೇನೆ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಸುಮಕ್ಕ ಮಂಡ್ಯದಲ್ಲಿ ಗೆದ್ದಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ನಾನು ಮಂಡ್ಯದ ಅಭಿವೃದ್ಧಿಗೆ ಯಾರ ಜೊತೆಗೆ ಬೇಕಾದರೂ ಕೈ ಜೋಡಿಸಲು ಸಿದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

ನಾನೇ ಹೊಣೆ:
ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಾನೇ ಹೊರುತ್ತೇನೆ. ಈ ಫಲಿತಾಂಶದ ಬಗ್ಗೆ ನಿಖಿಲ್ ಕುಮಾರಸ್ವಾಮಿ ಒಬ್ಬರನ್ನೇ ಟೀಕಿಸಿ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾರ್ಯಕರ್ತರು, ಗೌರವಾನ್ವಿತ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಅಧಿಕಾರಿ ದೇವೇಗೌಡರನ್ನು ಟೀಕಿಸುವುದು ಬೇಡ. ನನ್ನ ಎಲ್ಲಾ ಕಾರ್ಯಕರ್ತರ ಬಳಿಕ ನಾನು ಕ್ಷಮೆಯಾಚಿಸುತ್ತೇನೆ. ಯಾಕೆಂದರೆ ಜನರು ನಿಖಿಲ್ ಕುಮಾರಸ್ವಾಮಿಯನ್ನು ತಿರಸ್ಕರಿಸಿದ್ದಾರೆ. ಇದರಿಂದ ಕೆಲವು ಕಾರ್ಯಕರ್ತರು ನನ್ನಿಂದ ನಿರಾಸೆಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

SUMALATHA A 1

ಮತದಾರರಿಗೆ ಧನ್ಯವಾದಗಳು:
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ವರ್ಷದ ಬಜೆಟ್ ಮಂಡನೆಯಲ್ಲಿ ಮಂಡ್ಯ ಜಿಲ್ಲೆಗಾಗಿ 8,671 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಹೀಗಾಗಿ ಆ ಕೆಲಸಗಳು ಸರಿಯಾಗಿ ನಡೆಯುತ್ತಿದೆಯೋ ಎನ್ನುವುದನ್ನು ನಾನು ನೋಡಿಕೊಳ್ಳುತ್ತೇನೆ. ಯಾಕೆಂದರೆ ಅದು ನಮ್ಮ ಕರ್ತವ್ಯವಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿದ ಎಲ್ಲರಿಗೂ ಧನ್ಯವಾದಗಳು. 5 ಲಕ್ಷದ 76 ಸಾವಿರ 400 ಮತಗಳು ಬಂದಿವೆ. ಉಳಿದ ಮತದಾರರ ನಂಬಿಕೆ ಗಳಿಸಲು ಮುಂದಿನ ದಿನದಲ್ಲಿ ನಾನು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ ನಾನು ಈ ಪಯಣದಲ್ಲಿ ಸಾಕಷ್ಟು ಪಡೆದುಕೊಂಡಿದ್ದೇನೆ ಎಂದು ಭಾವಿಸುತ್ತೇನೆ. ನಾನು ಮೊದಲ ದಿನದಿಂದ ಪಾಸಿಟಿವ್ ವ್ಯಕ್ತಿಯಾಗಿದ್ದೇನೆ. ನಿಮಗೆ ನಿಖಿಲ್ ಕುಮಾರಸ್ವಾಮಿ ಒಬ್ಬ ಗಂಭೀರವಾದ ರಾಜಕಾರಣಿಯೇ? ಎನ್ನುವ ಪ್ರಶ್ನೆ ಮೂಡಿದ್ದರೆ, ನಾನು ಇಡೀ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಅಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ. ಜೊತೆಗೆ ನಮ್ಮ ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸುತ್ತೇನೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ಮಾಡುತ್ತೇನೆ. ನಿಮ್ಮ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು ಎಂದು ನಿಖಿಲ್ ಕುಮಾರ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

https://www.instagram.com/p/ByE3AIbHwi7/?utm_source=ig_embed

Share This Article
Leave a Comment

Leave a Reply

Your email address will not be published. Required fields are marked *