ಬಾಗಲಕೋಟೆ: ಬಾದಾಮಿಯಲ್ಲಿ ಭಾನುವಾರ ರಾತ್ರಿ ನಡೆದ ಮರಣವೇ ಮಹಾನವಮಿ ಎಂಬ ಕಾರ್ಯಕ್ರಮದಲ್ಲಿ ನಿಜಗುಣಾನಂದ ಸ್ವಾಮೀಜಿ ಅವರು ಸರ್ಕಾರದಿಂದ ರೈತರ ಸಾಲಮನ್ನಾ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಮುಂಡರಗಿ ಮಠಕ್ಕೆ ಸೇರಿರುವ ಸ್ವಾಮೀಜಿ ಸ್ಮಶಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, `ರೈತರು, ಕುಮಾರಸ್ವಾಮಿ ಸಾಲಮನ್ನಾ ಮಾಡಲಿ ಎಂದು ದೇವರ ಮುಂದೆ ಹೇಳೋದು, ದೇವರು ಕೇಳ್ತಾನೆ ಮಗನೇ ನಿನಗೆ ಸಾಲ ಮಾಡು ಅಂದೋರ್ ಯಾರು? ಅಂತ’ ಎಂದು ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
`ದೇವರು ಬಹಳ ಡೇಂಜರ್ ಅದಾನ. ನಾಲ್ಕು ಪ್ಯಾಂಟ್-ಶರ್ಟ್, 1 ರೊಟ್ಟಿ, ಒಂದಿಷ್ಟು ಲೋಟಾ ಹಾಲು, ಮಲಗೋಕೆ ಅರ್ಧ ಮಂಚ ಈ ಕಡೆ ತಿರುಗಿದ್ರೆ ಆ ಕಡೆಯಿಲ್ಲ ಎಲ್ಲಾ ದೇವರು ಕೊಟ್ಟಿದ್ದಾನೆ. 60 ವರ್ಷ ಆದ್ಮೇಲೆ ಶುಗರ್, ಬಿಪಿ ಬರುತ್ತೆ. ರೈತ ನಿನಗೆ ಸಾಲ ಯಾಕೆ ಬಂತು? ಇಸ್ಪೀಟ್ ಆಡೋದ್ರಿಂದ ಸಾಲ ಬಂತು, ವ್ಯಸನದಿಂದ ಸಾಲ ಬಂತು, ದೊಡ್ಡಸ್ಥನದಿಂದ ಸಾಲು ಬಂತು. ನಿನ್ನ ಸುಖಕ್ಕಾಗಿ ನೀನು ಸಾಲ ಮಾಡಿ ಈಗ ನೀನು ಉರುಳು ಹಾಕೊಂಡ್ರೆ ನಾನೇನು ಮಾಡ್ಲಿ’ ಅಂತ ದೇವರು ಅಂತಾನೆ ಎಂದು ಹೇಳುವ ಮೂಲಕ ರೈತ ವರ್ಗವನ್ನು ಸ್ವಾಮೀಜಿ ಅವಮಾನಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಷ್ಟೆ ಅಲ್ಲದೆ, ದೇವರು ಎಲ್ಲಾ ಕಷ್ಟಕ್ಕೂ ಪರಿಹಾರ ಕೊಡುವುದಾದರೆ ರೈತರ ಸಾಲಮನ್ನಾಕ್ಕೂ ಪರಿಹಾರ ಕೊಡ್ಲಿ ನೋಡೋಣ. ಒಟ್ಟಿನಲ್ಲಿ ಹಿತಮಿತ ಜೀವನವಿರಲಿ ಎಂಬ ಸಲಹೆ ನೀಡಿ ಪರೋಕ್ಷವಾಗಿ ಸಾಲಮನ್ನಾವನ್ನು ವಿರೋಧಿಸಿದ್ದಾರೆ.