ಮುಂಬೈ: ಮಾಲೀಕರಿಗೆ ತಿಳಿಯದೇ ಕೆಳ ಅಧಿಕಾರಿಗಳು 300 ಕೋಟಿ ರೂ. ಬೆಲೆ ಬಾಳುವ ಮಹಲ್(ಕೋಟೆ) ಮಾರಿದ್ದಾರೆ. ಈ ಸಂಬಂಧ ಮಾಲೀಕತ್ವ ಹೊಂದಿದ ಕಂಪನಿ ತನ್ನ ಮಾಜಿ ಉದ್ಯೋಗಿಗಳ ವಿರುದ್ಧ ದೂರು ನೀಡಿದೆ.
ಮುಂಬೈನ ನಿಹಾರಿಕಾ ಇನ್‍ಫ್ರಾಸ್ಟ್ರಕ್ಚರ್ ಕಂಪನಿ ಈ ಕುರಿತು ಪೊಲೀಸ್ ಠಾಣೆಯಲ್ಲಿ ತನ್ನ ಹಳೆಯ ಉದ್ಯೋಗಿಗಳ ವಿರುದ್ಧ ದೂರು ದಾಖಲಿಸಿದೆ. ನಿಹಾರಿಕಾ ಇನ್‍ಫ್ರಾಸ್ಟ್ರಕ್ಚರ್ ನವೀ ಮುಂಬೈನ ವಸತಿ ಮತ್ತು ವಾಣಿಜ್ಯ ಸಮುಚ್ಛಯ ನಿರ್ಮಾಣದ ಕೆಲಸ ಮಾಡಿಕೊಂಡಿದೆ.
Advertisement
Advertisement
ನಮ್ಮ ಕಂಪನಿಯ ಮಾಜಿ ಉದ್ಯೋಗಿಗಳಾದ ಸುರೇಶ್ ಕುಮಾರ್ ಮತ್ತು ರವಿಂದ್ರ ಎಂಬವರು ನಮ್ಮ ಬೆನ್ನಹಿಂದೆ ಹೈದರಾಬಾದ್ ನಲ್ಲಿಯ ನಮ್ಮ ಒಡೆತನದ ಆಸ್ತಿಯನ್ನು ಕಾಶ್ಮೀರದ ಐರಿಸ್ ಆಸ್ಪತ್ರೆಯ ಅಮಿತ್ ಅಮಲಾ ಮತ್ತು ಅರ್ಜುನ್ ಅಮಲಾ ಎಂಬವರಿಗೆ ಮಾರಾಟ ಮಾಡಿದ್ದಾರೆ. ನಾವು ಮೂರು ವರ್ಷಗಳ ಹಿಂದೆ 100 ವರ್ಷಗಳ ಹಳೆಯ ನಝ್ರಿ ಬಾಗ್ ಪ್ಯಾಲೇಸ್ ನ್ನು ನಝ್ರಿ ಬಾಗ್ ಟ್ರಸ್ಟ್‍ನಿಂದ ಖರೀದಿಸಲಾಗಿತ್ತು. ಕಿಂಗ್ ಕೋಟಿ ಎಂದು ಸ್ಥಳೀಯವಾಗಿ ಈ ಪ್ಯಾಲೇಸ್ ನ್ನು ಕರೆಯಲಾಗುತ್ತದೆ. ಈ ವರ್ಷ ಜೂನ್ ನಲ್ಲಿ ನಮ್ಮ ಕೆಲ ಅಧಿಕಾರಿಗಳು ಆಸ್ತಿಗಳ ಪರಿಶೀಲನೆಗಾಗಿ ಹೈದರಾಬಾದ್ ಗೆ ತೆರಳಿದಾಗ ಮಾರಾಟದ ವಿಷಯ ಬೆಳಕಿಗೆ ಬಂದಿದೆ. ನಮಗೆ ಗೊತ್ತಿಲ್ಲದೇ 300 ಕೋಟಿ ರೂ. ಬೆಲೆಯ ಆಸ್ತಿಯನ್ನು ಐರಿಸ್ ಆಸ್ಪತ್ರೆಗೆ ಮಾರಿದ್ದಾರೆ ಎಂದು ಕಂಪನಿ ತನ್ನ ದೂರಿನಲ್ಲಿ ತಿಳಿಸಿದೆ.
Advertisement
ಸುರೇಶ್ ಕುಮಾರ್ ಮತ್ತು ರವಿಂದ್ರ ಈ ಮಾರಾಟದಲ್ಲಿ ಭಾಗಿಯಾಗಿದ್ದು, ಫೆಬ್ರವರಿಯಲ್ಲಿ ನಿಹಾರಿಕಾ ಇನ್‍ಫ್ರಾಸ್ಟ್ರಕ್ಚರ್ ಕಂಪನಿಯ ಕೆಲಸ ಬಿಟ್ಟಿದ್ದಾರೆ. ಈ ಇಬ್ಬರು ಹೈದರಾಬಾದ್ ಮೂಲದ ಓರ್ವ ವ್ಯಕ್ತಿಯ ಸಹಾಯದಿಂದ ನಕಲಿ ದಾಖಲಾತಿ ಸಲ್ಲಿಸಿ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಈ ಸಂಬಂಧ ಎಫ್‍ಐಆರ್ ದಾಖಲಾಗಿದ್ದು, ಇಬ್ಬರ ಪತ್ತೆಗಾಗಿ ಬಲೆ ಬೀಸಲಾಗಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
2.5 ಲಕ್ಷ ಚದರ ಅಡಿ ವಿಸ್ತಾರದಲ್ಲಿರುವ ಕೋಟೆಯಾಗಿದೆ. ಸ್ವತಂತ್ರಕ್ಕೂ ಮೊದಲು ಇಲ್ಲಿ ಹೈದರಾಬಾದ್ ನಿಜಾಮರು ವಾಸವಾಗಿರುತ್ತಿದ್ದರು. 1967ರಲ್ಲಿ ಕೊನೆಯ ನಿಜಾಮ ಸಾವನ್ನಪ್ಪಿದ ಬಳಿಕ ಕೋಟೆ ಟ್ರಸ್ಟ್ ಒಡೆತನಕ್ಕೆ ಸೇರಿತ್ತು. ಮೊದಲಿಗೆ ಈ ಕೋಟೆಯನ್ನು ನಝ್ರಿ ಬಾಗ್ ಎಂದು ಕರೆಯಲಾಗುತ್ತಿತ್ತು. ನಂತರ ಕಿಂಗ್ ಕೋಟಿ ಎಂದು ಬದಲಾಯಿಸಲಾಯ್ತು.