– ಲಂಡನ್ ನಿವಾಸಿ ಎಂದು ನಂಬಿಸಿ ಹಣ ಪಡೆದಿದ್ದ ವಂಚಕ
ಬಾಗಲಕೋಟೆ: ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಮೋಸಮಾಡಿದ ನೈಜಿರಿಯಾ (Nigeria) ಮೂಲದ ವ್ಯಕ್ತಿಯನ್ನು ಬಾಗಲಕೋಟೆ ಸಿಇಎನ್ ಪೊಲೀಸರು (Bagalkote CEN Police) ಬಂಧಿಸಿದ್ದಾರೆ.
ಅಲಿವರ್ ವುಗುವೊ ಒಕಿಚಿಕು ಎಂಬ ವ್ಯಕ್ತಿ ಬಂಧಿತ ಆರೋಪಿ. ಈ ಬಂಧಿತನಿಂದ 4 ಮೊಬೈಲ್, 1 ಲ್ಯಾಪ್‌ಟಾಪ್, ಪಾಸ್‌ಪೋರ್ಟ್, ಅಮೆರಿಕ ಡಾಲರ್ ಇರುವ ಬಂಡಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಅಲಿವರ್ ಇಳಕಲ್ ಮೂಲದ ಮಹಿಳೆಗೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿ 5.50 ಲಕ್ಷ ರೂ. ಪಡೆದು ಮೋಸಮಾಡಿದ್ದ. ಹೀಗಾಗಿ ಮೋಸಹೋದ ಮಹಿಳೆ ಇಳಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳೆಯ ದೂರಿನ ಅನ್ವಯ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬಾಗಲಕೋಟೆ ಸಿಇಎನ್ ಪೊಲೀಸರು, ಈತನ ಜಾಡು ಹಿಡಿದು ಮುಂಬೈನಲ್ಲಿ (Mumbai) ನೆಲೆಸಿದ್ದ ಆರೋಪಿಯನ್ನ ವಶಕ್ಕೆ ಪಡೆದು, ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೋಸ ಹೇಗೆ?
ಅಲಿವರ್ ವುಗುವೊ ಒಕಿಚಿಕು ಮೆಟ್ರೋಮೋನಿ ಮೂಲಕ ಇಳಕಲ್ ಮೂಲದ ಡಿವೋರ್ಸ್ ಆಗಿದ್ದ ಸ್ನೇಹಾ(ಹೆಸರು ಬದಲಾಯಿಸಲಾಗಿದೆ) ಅವರನ್ನು ಅಮಿತ್ ದಾಸ್ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದ. ಲಂಡನ್‌ನಲ್ಲಿ ನಾನು ನೆಲೆಸಿದ್ದೇನೆ. ನನ್ನ ಬಳಿ ಲಕ್ಷಾಂತರ ರೂ. ದುಡ್ಡಿದೆ. ನಿಮ್ಮ ಪ್ರೊಫೈಲ್ ನನಗೆ ಇಷ್ಟವಾಯಿತು ಎಂದು ಹೇಳಿ ನಂಬಿಸಿದ್ದ. ಪ್ರೊಫೈಲಿನಲ್ಲಿ ಬೇರೆ ಫೋಟೋ ಹಾಕಿದ್ದರಿಂದ ಸ್ನೇಹಾ ಈತನ ಮಾತನ್ನು ನಂದಿದ್ದರು. ಇದನ್ನೂ ಓದಿ: ಡಿ.ಕೆ ಶಿವಕುಮಾರ್ ದೇಶದ ಎರಡನೇ ಶ್ರೀಮಂತ ಸಚಿವ – ಒಟ್ಟು ಆಸ್ತಿ ಎಷ್ಟು?
ಒಂದು ದಿನ ಲಂಡನ್‌ನಿಂದ ಒಂದು ಸಾವಿರ ಯುಎಸ್ ಡಾಲರ್ ತಂದಿದ್ದೇನೆ. ದೆಹಲಿ ಕಸ್ಟಮ್ಸ್ ಆಫೀಸ್‌ನಲ್ಲಿ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಹಣವನ್ನು ಬಿಡಿಸಿಕೊಳ್ಳಲು ತುರ್ತಾಗಿ ಇಂಡಿಯನ್ ಕರೆನ್ಸಿ ಬೇಕಾಗಿದೆ ಎಂದು ಹೇಳಿದ್ದ. ಈತನ ಮಾತನ್ನು ಕೇಳಿ ಲಕ್ಷ ಲಕ್ಷ ಹಣವವನ್ನು ಸ್ನೇಹಾ ವರ್ಗಾಯಿಸಿದ್ದರು. ಹಣ ಖಾತೆಗೆ ಬಂದ ಬೆನ್ನಲ್ಲೇ ಆತ ಸಂಪರ್ಕ ಕಡಿತಗೊಳಿಸಿದ್ದ.
ತಾನು ವಂಚನೆಗೆ ಒಳಗಾದ ವಿಚಾರ ಗೊತ್ತಾಗಿ ಸ್ನೇಹಾ ಅವರು 2024 ರಲ್ಲಿ ಇಳಕಲ್ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಕೇಸ್ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ಈ ಪ್ರಕರಣವನ್ನು ತನಿಖೆ ಚುರುಕುಗೊಳಿಸಿದ ಸಿಇಎನ್ ಪೊಲೀಸರು ಕಾರ್ಯಾಚರಣೆ ಮಾಡಿ ನೈಜೀರಿಯನ್ ಪ್ರಜೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.