ಬೆಂಗಳೂರು: ಮನೆಯೊಂದರಲ್ಲಿ ಸಂಗ್ರಹಿಸಿದ್ದ ಸ್ಫೋಟಕ ತಯಾರಿಕೆಯಲ್ಲಿ ಬಳಸುವ ಸೋಡಿಯಂ ನೈಟ್ರೇಟ್‍ನ್ನು (Sodium Nitrate) ಎನ್‍ಐಎ (NIA) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸೋಡಿಯಂ ನೈಟ್ರೇಟ್‍ನ್ನು ಅಡಗಿಸಿಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕೃತಿ ನಗರದ ಸಂಪತ್ ಎಂಬವರ ಮನೆಯಲ್ಲಿ ಬಾಡಿಗೆಗಿದ್ದ ಶಮಿವುಲ್ಲಾ ಹಾಗೂ ಅಲ್ತಾಫ್, ಮಿಸ್ಬಾ ಹಾಗೂ ಮುನಿರುದ್ದೀನ್ ಸೋಡಿಯಂ ನೈಟ್ರೇಟ್ ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ. ಶಮಿವುಲ್ಲಾ ಎಲ್‍ಎಲ್‍ಬಿ ಪದವೀಧರನಾಗಿದ್ದು, ಅಲ್ತಾಫ್ ಪೀಣ್ಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮುನಿರುದ್ದೀನ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದು, ಮಿಸ್ಬಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇವರನ್ನು ಎನ್‍ಐಎ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: 5000 ಅಮೆರಿಕನ್ ಡೈಮಂಡ್, ಬೆಳ್ಳಿಯಲ್ಲಿ ಅರಳಿದ ʼಅಯೋಧ್ಯೆ ರಾಮಮಂದಿರʼ ನೆಕ್ಲೆಸ್
ಮುಂಜಾನೆಯಿಂದಲೇ ಬಳ್ಳಾರಿಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದ 9 ಎನ್‍ಐಎ ತಂಡಗಳು ನಿಷೇಧಿತ ಪಿಎಫ್‍ಐನ 7 ಮಂದಿಯ ಮನೆಗಳ ಮೇಲೆ ದಾಳಿ ನಡೆಸಿದೆ. ಬಳ್ಳಾರಿಯ ಮಾಜಿ ಪಿಎಫ್‍ಐ ಪ್ರಧಾನ ಕಾರ್ಯದರ್ಶಿ ಸುಲೇಮಾನ್, ನಿಖಿಲ್ @ ಸೂಫಿಯಾನ್, ಇಜಾಜ್ ಅಹ್ಮದ್, ತಬ್ರೇಜ್ ಮತ್ತು ಮುಜಾಮಿಲ್ ಎಂಬವರ ಮನೆ ಮೇಲೆ ಸಹ ದಾಳಿ ನಡೆಸಿದ್ದು, 8 ಜನರನ್ನು ಬಂಧಿಸಲಾಗಿದೆ.
ಸುಲೇಮಾನ್ ಅಫ್ಘಾನಿಸ್ತಾನಕ್ಕೆ ಹೋಗಿ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಲು ಯೋಜನೆ ರೂಪಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಇತ್ತೀಚೆಗೆ ಹೈದ್ರಬಾದ್‍ನಲ್ಲಿ ಯುಎಪಿಎ ಹಾಗೂ ಕ್ರಿಮಿನಲ್ ಸಂಚಿನ ಪ್ರಕರಣ ದಾಖಲಿಸಿದ್ದ ಎನ್‍ಐಎ ಅಧಿಕಾರಿಗಳು ಶಂಕಿತರನ್ನು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಪ್ರಕರಣದಲ್ಲಿ ರಾಜ್ಯದ ಲಿಂಕ್ ಇರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ದೇಶಾದ್ಯಂತ ಎನ್‍ಐಎ ಅಧಿಕಾರಿಗಳು 41 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಪ್ರಕರಣ – ಶಾಲೆಗೆ ಕೇಂದ್ರ ಸಚಿವ ನಾರಾಯಣಸ್ವಾಮಿ, ಆರ್.ಅಶೋಕ್ ಭೇಟಿ