ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ಗೆ ಯುವಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಐದು ರಾಜ್ಯಗಳ 19 ಸ್ಥಳಗಳಲ್ಲಿ ಶೋಧ ನಡೆಸಿದೆ. ಜಮ್ಮು ಮತ್ತು ಕಾಶ್ಮೀರ (Jammu and Kashmir), ಅಸ್ಸಾಂ, ಮಹಾರಾಷ್ಟ್ರ (Maharashtra), ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಶಂಕಿತರ ಅಡಗುತಾಣಗಳ ಮೇಲೆ ಮುಂಜಾನೆಯೇ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂನ (Assam) ಗೋಲ್ಪಾರಾ ಜಿಲ್ಲೆಯಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ನೊಂದಿಗೆ ಸಂಪರ್ಕ ಹೊಂದಿದ್ದ ಯುವಕನನ್ನು ಎನ್‌ಐಎ ಬಂಧಿಸಿದೆ. ಬಂಧಿತ ಯುವಕನನ್ನು ಸಹನೂರು ಆಲಂ ಎಂದು ಗುರುತಿಸಲಾಗಿದೆ. ಆಲಂನನ್ನು ಗೋಲ್ಪಾರಾದ ತುಕುರಾ ಗ್ರಾಮದಲ್ಲಿ ಬಂಧಿಸಲಾಗಿದೆ. ಅಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸಿದ ದಾಳಿಯ ವೇಳೆ ಅಬು ತಾಲೇಬ್ ಮತ್ತು ಝೈನಾಲ್ ಅವೆದಿನ್ ಎಂಬವರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನೆರವಿನೊಂದಿಗೆ ಎನ್‌ಐಎ ಕಾರ್ಯಾಚರಣೆ ನಡೆಸಿದೆ.
Advertisement
ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆಯ ವೇಳೆ ಹಲವಾರು ದೋಷಾರೋಪಣೆಯ ದಾಖಲೆಗಳು, ಎಲೆಕ್ಟ್ರಾನಿಕ್ ಸಾಧನಗಳು, ಕರಪತ್ರಗಳು ಮತ್ತು ನಿಯತಕಾಲಿಕೆಗಳನ್ನು ಎನ್ಐಎ ತಂಡಗಳು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಶಂಕಿತ ಉಗ್ರರು, ಭಯೋತ್ಪಾದಕ ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳುತ್ತಿದ್ದರು. ಈ ಸಂಬಂಧ ಪ್ರಚಾರದಲ್ಲಿ ತೊಡಗಿದ್ದರು. ಅಲ್ಲದೇ ಯುವಕರಿಗೆ ಭಯೋತ್ಪಾದಕ ಕೃತ್ಯಗಳಿಗೆ ತರಬೇತಿ ನೀಡುತ್ತಿದ್ದರು ಎಂದು ಎನ್ಐಎ ಹೇಳಿಕೊಂಡಿದೆ.
Advertisement
ಅಕ್ಟೋಬರ್ 5 ರಂದು ಅಸ್ಸಾಂ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ 26 ಸ್ಥಳಗಳಲ್ಲಿ ಶೋಧ ನಡೆಸಿದ್ದ ಎನ್‌ಐಎ ಶೇಖ್ ಸುಲ್ತಾನ್ ಸಲಾಹ್ ಉದ್ದೀನ್ ಅಯೂಬಿ ಎಂಬಾತನನ್ನು ಬಂಧಿಸಿತ್ತು. ಆತನ ವಿರುದ್ಧ ಭಯೋತ್ಪಾದಕ ಕೃತ್ಯಗಳಿಗೆ ಪಿತೂರಿ ಆರೋಪ ಹೊರಿಸಲಾಗಿದೆ. ಈತನನ್ನು ವಿಚಾರಣೆಗೆ ಒಳಪಡಿಸಿದ್ದ ಎನ್‌ಐಎ ತಂಡ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿತ್ತು. ಇದರ ಬೆನ್ನಲ್ಲೇ ಎನ್‌ಐಎ ಶೋಧ ಕಾರ್ಯ ಆರಂಭಿಸಿದೆ.