– ರಾಣಾನನ್ನ ತಿಹಾರ್ ಜೈಲಲ್ಲಿಡಲು ವ್ಯವಸ್ಥೆ – ದೆಹಲಿಯಲ್ಲೇ ನಡೆಯಲಿದೆ ವಿಚಾರಣೆ
ಮುಂಬೈ: 2008ರ ಮುಂಬೈ ಭಯೋತ್ಪಾದಕ ದಾಳಿಯ (Mumbai Attack) ಸಂಚುಕೋರ ತಹವ್ವೂರ್ ರಾಣಾನನ್ನು (Tahawwur Rana) ಅಮೆರಿಕದಿಂದ ಗಡಿಪಾರು ಮಾಡಲಾಗಿದ್ದು ಇಂದು ಮಧ್ಯಾಹ್ನದ ಬಳಿಕ ಭಾರತಕ್ಕೆ ಬಂದಿಳಿಯಲಿದ್ದಾನೆ.
ಎನ್‌ಐಎ ಮತ್ತು ರಾ ಅಧಿಕಾರಿ ತಂಡಗಳ ಬಿಗಿ ಭದ್ರತೆಯೊಂದಿಗೆ ವಿಶೇಷ ವಿಮಾನದಲ್ಲಿ ದೆಹಲಿಯ ಪಾಲಂ ಏರ್‌ಪೋರ್ಟ್‌ನ ಟರ್ಮಿನಲ್ 1ನಲ್ಲಿ ಬಂದಿಳಿಯಲಿದ್ದಾನೆ. ಇಲ್ಲಿಂದ ಅವನನ್ನ ಎನ್‌ಐಎ ಕೇಂದ್ರ ಕಚೇರಿಗೆ ಕರೆದೊಯ್ಯಲು ವಿಶೇಷ ಬುಲೆಟ್ ಪ್ರೂಫ್ ವಾಹನ ಸಿದ್ಧವಾಗಿದೆ. ಅದಕ್ಕಾಗಿ ಎನ್‌ಐಎ ಕಚೇರಿ ಹೊರಗಿನ ಭದ್ರತೆ ಪರಿಶೀಲಿಸಲು ದಕ್ಷಿಣ ಡಿಸಿಪಿ ಸ್ಥಳಕ್ಕೆ ತೆರಳಿದ್ದಾರೆ.
ಎನ್‌ಐಎ ಮೂಲಗಳ ಪ್ರಕಾರ, ಈಗಾಗಲೇ ರಾಣಾನನ್ನ ಸೇಫಾಗಿ ಎನ್‌ಐಎ ಕಚೇರಿಗೆ ಕರೆತರಲು ಮಾರ್ಕ್ಸ್‌ಮನ್ (Marksman) ವಿಶೇಷ ಬುಲೆಟ್ ಪ್ರೂಫ್ ವಾಹನವನ್ನ ಪಾಲಂ ಏರ್‌ಪೋರ್ಟ್‌ನಲ್ಲಿ ಇರಿಸಲಾಗಿದೆ. ದೆಹಲಿ ಪೊಲೀಸರ ವಿಶೇಷ ವಿಭಾಗದ SWAT (ಸ್ವಾಟ್) ಕಾಂಡೋಗಳನ್ನೂ ಸಹ ಸ್ಥಳದಲ್ಲಿ ನಿಯೋಜಿಸಲಾಗಿದೆ. ಜೊತೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಭದ್ರತಾ ವಿಭಾಗ ಮತ್ತು ಸ್ಥಳೀಯ ಪೊಲೀಸರು ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಲರ್ಟ್ ಆಗಿದ್ದಾರೆ.
ಮಾರ್ಕ್ಸ್‌ಮನ್ ಬುಲೆಟ್‌ಪ್ರೂಫ್ ಕಾರು ಎಷ್ಟು ಸೇಫ್?
ಮಾರ್ಕ್ಸ್‌ಮನ್ (Marksman) ಅತ್ಯಂತ ಸುರಕ್ಷಿತವಾದ ಕಾರು, ಬುಲೆಟ್ ನಿಂದ ಮಾತ್ರವಲ್ಲದೇ ಗ್ರೆನೇಡ್ ದಾಳಿ ನಡೆದರೂ ಸಹ ಇದರ ಒಳಗಿರುವವರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ದೊಡ್ಡ ದೊಡ್ಡ ಭಯೋತ್ಪಾದಕರು, ದರೋಡೆಕೋರರನ್ನು ಸಂಬಂಧ ಪಟ್ಟ ಸ್ಥಳಗಳಿಗೆ ಸುರಕ್ಷಿತವಾಗಿ ಕರೆದೊಯ್ಯಲು ಈ ವಾಹನವನ್ನ ಬಳಸಲಾಗುತ್ತದೆ.
ರಾಣಾ ಭಾರತಕ್ಕೆ ತಲುಪಿದ ಕೂಡಲೇ ಎನ್‌ಐಎ ತಂಡ ಅಧಿಕೃತವಾಗಿ ಕಸ್ಟಡಿಗೆ ತೆಗೆದುಕೊಳ್ಳಲಿದೆ. ಮೊದಲು ಎನ್‌ಐಎ ಕಚೇರಿಗೆ ಕರೆತರಲಿದ್ದು, ಕೆಲ ಕಾಲ ವಿಚಾರಣೆ ಬಳಿಕ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಯಿದೆ. ಕೋರ್ಟ್‌ಗೆ ಹಾಜರುಪಡಿಸುವುದಕ್ಕೂ ಮುನ್ನ ಎನ್‌ಐಎ ಅಧಿಕಾರಿಗಳ ಭದ್ರತೆಯಲ್ಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಂತರ ದೆಹಲಿ ತಿಹಾರ್ ಜೈಲಿನ ಹೈಸೆಕ್ಯುರಿಟಿ ವಾರ್ಡ್‌ನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ತಹವ್ವೂರ್ ರಾಣಾ ಯಾರು?
ತಹವ್ವೂರ್ ರಾಣಾ ಹುಟ್ಟಿದ್ದು ಪಾಕಿಸ್ತಾನದಲ್ಲಿ. ಆರ್ಮಿ ಮೆಡಿಕಲ್ ಕಾಲೇಜಿನಲ್ಲಿ (Medical College) ಅಧ್ಯಯನ ಮಾಡಿದ ರಾಣಾ, ಪಾಕಿಸ್ತಾನದ ಸೇನೆಯಲ್ಲಿ 10 ವರ್ಷಗಳ ಕಾಲ ವೈದ್ಯನಾಗಿ ಕೆಲಸ ಮಾಡಿದ್ದ. ಈ ಕೆಲಸ ಇಷ್ಟವಾಗದೇ ಸೇನೆ ತೊರೆದ ರಾಣಾ, ಭಾರತದ ವಿರುದ್ಧ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದ. ಸದ್ಯ ರಾಣಾ ಕೆನಡಾ ಮೂಲದ ಉದ್ಯಮಿ.
ರಾಣಾ ನವೆಂಬರ್ 11 ಮತ್ತು 21, 2008 ರ ನಡುವೆ ದುಬೈ ಮೂಲಕ ಮುಂಬೈಗೆ ಬಂದಿದ್ದ. ಪೊವೈನಲ್ಲಿರುವ ಹೋಟೆಲ್ ರಿನೈಸಾನ್ಸ್‌ನಲ್ಲಿ ತಂಗಿ ದಾಳಿಗೆ ಬೇಕಾದ ಸಿದ್ಧತೆ ಪರಿಶೀಲಿಸಿದ್ದ. ಈತ ದುಬೈಗೆ ಹೋದ 5 ದಿನಗಳ ಬಳಿಕ ದಾಳಿ ನಡೆದಿತ್ತು. ಭಾರತವು ಜೂನ್ 2020 ರಲ್ಲಿ ರಾಣಾನನ್ನು ಗಡಿಪಾರಿಗಾಗಿ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಈ ವರ್ಷದ ಫೆಬ್ರವರಿಯಲ್ಲಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಣಾನನ್ನು ಗಡಿಪಾರು ಮಾಡಲಾಗುವುದು ಎಂದು ದೃಢಪಡಿಸಿದ್ದರು.
ನೆನಪಿದೆಯಾ ಕರಾಳ ಮುಂಬೈ ದಾಳಿ
2008 ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸಿ 166 ಜನರನ್ನು ಕೊಂದಿದ್ದರು. 300 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.