ಬೆಂಗಳೂರು: ರಾಷ್ಟ್ರೀಯ ತನಿಖಾ ದಳದ(ಎನ್‍ಐಎ) ಅಧಿಕಾರಿಗಳು ಬೆಂಗಳೂರಿನಲ್ಲಿ ಶಂಕಿತ ಐಸಿಸ್ ಉಗ್ರನನ್ನು ಬಂಧಿಸಿದ್ದಾರೆ.
ಫಜಿ ಉರ್ ರೆಹಮಾನ್ ಬಂಧಿತ ವ್ಯಕ್ತಿ. ಒಂದು ವಾರದಿಂದ ಶಂಕಿತ ಉಗ್ರನ ಚಲನ ವಲನದ ಬಗ್ಗೆ ನಿಗಾ ವಹಿಸಿದ್ದ ಎನ್‍ಐಎ ಕೊನೆಗೂ ಬಂಧಿಸಿದೆ.
ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ ಫಜಿ ಉರ್ ರೆಹಮಾನ್ ಮಾಹಿತಿ ಕಲೆ ಹಾಕಲು ಎನ್‍ಐಎ ಅಧಿಕಾರಿಗಳು ಮಾರುವೇಷ ತೊಟ್ಟಿದ್ದರು. ಬಾಂಬ್ ತಯಾರಿ ಹಾಗೂ ಶೂಟಿಂಗ್ ತರಬೇತಿಗೆ ಸಾಮಾಗ್ರಿಗಳನ್ನು ಸರಬರಾಜು ಮಾಡುತ್ತಿದ್ದ ರೆಹಮಾನ್ ಬಂಧಿಸಲು ಹೋದಾಗ ಪರಾರಿಯಾಗಲು ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ್ದಾನೆ.
ಚರ್ಮಗಳನ್ನು ಹದಮಾಡುವ ಜಾಗದ ಒಳಗೆ ಓಡಿ ಹೋಗಿ ರೆಹಮಾನ್ ಅವಿತು ಕುಳಿತ್ತಿದ್ದ. ಕತ್ತಲು ಹಾಗೂ ದುರ್ವಾಸನೆ ಇರುವ ಜಾಗದಲ್ಲಿ ಆರೋಪಿ ಅವಿತಿದ್ದರಿಂದ ಒಳಗಡೆ ಹೋಗಲು ಪೊಲೀಸರು ಮತ್ತು ಅಧಿಕಾರಿಗಳು ಒದ್ದಾಡಿದ್ದಾರೆ.
ಬಂಧನದ ಸಮಯದಲ್ಲಿ ಜೋರಾಗಿ ಗಲಾಟೆ ಮಾಡಿ ಹೈಡ್ರಾಮಾ ಸೃಷ್ಟಿಸಿದ್ದರಿಂದ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ನಂತರ ಅಧಿಕಾರಿಗಳು ಅಲ್ಲಿದ್ದ ಜನರಿಗೆ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿ ಒಂದೂವರೆ ಗಂಟೆಯ ನಂತರ ರೆಹಮಾನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.