ಚೆನ್ನೈ: ಭಾರತದ ಸಂವಿಧಾನ ಹಾಗೂ ನ್ಯಾಯಾಂಗ ಇಸ್ಲಾಂಗೆ ವಿರುದ್ಧವಾಗಿದೆ ಎಂದು ಬಿಂಬಿಸಿ ರಹಸ್ಯ ತರಗತಿಗಳ ಮೂಲಕ ಯುವಕರಿಗೆ ಬೋಧಿಸುತ್ತಿದ್ದ ಇಬ್ಬರು ಶಂಕಿತ ಉಗ್ರರನ್ನು ತಮಿಳುನಾಡಿನ ತಂಜಾವೂರ್‌ನಲ್ಲಿ (Thanjavur) ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಅಬ್ದುಲ್ ರೆಹಮಾನ್ ಮತ್ತು ಮುಜಿಬುರ್ ರೆಹಮಾನ್ ಅಲ್ತಮ್ ಸಾಹಿಬ್ ಎಂದು ಗುರುತಿಸಲಾಗಿದೆ. ಇಬ್ಬರು ಹಿಜ್ಬ್-ಉತ್-ತಹ್ರೀರ್ ಹಾಗೂ ಅಂತರರಾಷ್ಟ್ರೀಯ ಪ್ಯಾನ್-ಇಸ್ಲಾಮಿಸ್ಟೇಟ್‌ನ ಮೂಲಭೂತವಾದಿ ಗುಂಪಿನ ಸದಸ್ಯರಾಗಿದ್ದಾರೆ. ಈ ಸಂಘಟನೆ ಇಸ್ಲಾಮಿಕ್ ಕ್ಯಾಲಿಫೇಟ್‍ನ್ನು ಮರುಸ್ಥಾಪಿಸಲು ಮತ್ತು ಹಿಜ್ಬ್-ಉತ್-ತಹ್ರಿರ್ನ ಸಂಸ್ಥಾಪಕ ತಕಿ ಅಲ್-ದಿನ್ ಅಲ್-ನಭಾನಿ ಬರೆದ ಸಂವಿಧಾನವನ್ನು ಜಾರಿಗೊಳಿಸಲು ಕೆಲಸ ಮಾಡುತ್ತಿದೆ ಎಂದು ಎನ್‍ಐಎ ತಿಳಿಸಿದೆ. ಇದನ್ನೂ ಓದಿ: ಅಂಬುಲೆನ್ಸ್, ಬೈಕ್ ಮಧ್ಯೆ ಅಪಘಾತ – ಮೂವರು ಸವಾರರು ದುರ್ಮರಣ
ತಮಿಳುನಾಡಿನ (Tamil Nadu) ಐದು ಜಿಲ್ಲೆಗಳ 10 ಸ್ಥಳಗಳಲ್ಲಿ ವ್ಯಾಪಕ ಶೋಧದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ಇಬ್ಬರನ್ನು ಬಂಧಿಸಿದೆ. ಬಂಧಿತರು ಯುವಕರಿಗೆ ಉಗ್ರಗಾಮಿ ಸಿದ್ಧಾಂತಗಳ ಬಗ್ಗೆ ರಹಸ್ಯ ತರಗತಿಗಳಲ್ಲಿ ಬೋಧನೆ ಮಾಡುತ್ತಿದ್ದರು. ತರಗತಿಯಲ್ಲಿ ಭಾರತೀಯ ಸಂವಿಧಾನ, ಕಾನೂನು ಮತ್ತು ನ್ಯಾಯಾಂಗವನ್ನು ಇಸ್ಲಾಂ ವಿರೋಧಿ ಎಂದು ಬಿಂಬಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಿಂದ ಮೊಬೈಲ್ ಫೋನ್‍ಗಳು, ಲ್ಯಾಪ್‍ಟಾಪ್, ಸಿಮ್ ಮತ್ತು ಮೆಮೊರಿ ಕಾರ್ಡ್‍ಗಳು ಮತ್ತು ಹಿಜ್ಬ್-ಉತ್-ತಹ್ರೀರ್, ಖಿಲಾಫಾ, ಇಸ್ಲಾಮಿಕ್ ಸ್ಟೇಟ್‍ನ ಸಿದ್ಧಾಂತವನ್ನು ಒಳಗೊಂಡಿರುವ ಪುಸ್ತಕಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ತನಿಖೆ ಮುಂದುವರಿದ್ದು, ಉಗ್ರ ಸಂಘಟನೆಯ ಜಾಲದ ಬಗ್ಗೆ ಎನ್‍ಐಎ ಮಾಹಿತಿ ಕಲೆಹಾಕುತ್ತಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಜು.1 ರಿಂದ ದೇಶದಲ್ಲಿ ಮೂರು ಹೊಸ ಕಾನೂನು ಜಾರಿ – ಹೇಗಿದೆ ಸಿದ್ಧತೆ?