ಬೆಂಗಳೂರು: ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) ಷರತ್ತುಬದ್ಧ ಅನುಮತಿ ನೀಡಿ ಮಹತ್ವದ ಆದೇಶ ಹೊರಡಿಸಿದೆ.
ಯೋಜನೆಯಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ ಅಂತಾ ಆರೋಪಿಸಿ ಪರಿಸರ ವಾದಿ ಕೆ.ಎನ್. ಸೋಮಶೇಖರ್ ಸಲ್ಲಿಸಿದ್ದ ಅರ್ಜಿ ಇತ್ಯರ್ಥ ಪಡಿಸಿರುವ ಎನ್‍ಜಿಟಿ ಮುಂದಿನ ಆದೇಶದಲ್ಲಿ ಷರತ್ತು ಮತ್ತು ನಿರ್ದೇಶನಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದೆ.
ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು ಅದನ್ನ ಮುಂದುವರೆಸಬಹುದು. ಆದ್ರೆ ಕೆಲ ಷರತ್ತು ಮೇರೆಗೆ ಕಾಮಗಾರಿ ಮುಂದುವರಿಸಲು ಯಾವುದೇ ತಕರಾರು ಇಲ್ಲ ಅಂತ ನ್ಯಾ. ಜಾವೇದ್ ರಹೀಮ್ ಮತ್ತು ನ್ಯಾ. ರಂಜನ್ ಚಟರ್ಜಿ ನೇತೃತ್ವದ ಪೀಠ ಹೇಳಿದೆ. ಆದ್ರೆ ಸದ್ಯದ ಆದೇಶದಲ್ಲಿ ಯಾವುದೇ ಷರತ್ತು ಮತ್ತು ನಿರ್ದೇಶನಗಳ ಬಗ್ಗೆ ಮಾಹಿತಿ ನೀಡಿಲ್ಲ. ಈ ಯೋಜನೆ ವಿರುದ್ಧ ಇನ್ನೂ ಎರಡು ಅರ್ಜಿಗಳು ಬಾಕಿ ಇದ್ದು ಪುರುಷೊತ್ತಮ್ ಚಿತ್ತಾಪುರ ಕುಡಿಯುವ ನೀರಿನ ವಿಚಾರವಾಗಿ ಹಾಗೂ ಕಿಶೋರ್ ಕುಮಾರ್ ಎಂಬುವರು ಯೋಜನೆಯಿಂದ ಜೀವ ವೈವಿಧ್ಯತೆಗೆ ದಕ್ಕೆಯಾಗುತ್ತದೆ ಅಂತ ಆರೋಪಿಸಿ ಅರ್ಜಿ ಸಲ್ಲಿಸಿದ್ರು. ಈ ಅರ್ಜಿಗಳು ಇನ್ನು ವಿಚಾರಣೆ ಹಂತದಲ್ಲಿದೆ.