ಬೆಂಗಳೂರು: ಕಾಂಗ್ರೆಸ್ ನಾಯಕತ್ವ (Congress Leadership) ಫೈಟ್ ಮತ್ತಷ್ಟು ಜೋರಾಗಿದ್ದು ಸಮರಕ್ಕೆ ತಿರುಗಿತಾ ಎಂಬ ಪ್ರಶ್ನೆ ಎದ್ದಿದೆ.
ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿ ಉರುಳಿಸಿದ ಹೊಸ ದಾಳದಿಂದ ಈ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಅರಮನೆ ಮೈದಾನದಲ್ಲಿ ಸರ್ಕಾರಿ ಸಂಘದ ನಿರ್ದೇಶಕರು ಹಾಗೂ ಪದಾಧಿಕಾರಿಗಳ ‘ಸಮಾವೇಶ ಹಾಗೂ ಕಾರ್ಯಾಗಾರ’ದಲ್ಲಿ ಡಿಸಿಎಂ ಮಾತನಾಡುತ್ತಿದ್ದರು. ಭಾಷಣದಲ್ಲಿ ಗ್ಯಾರಂಟಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಹಳೆ ಪಿಂಚಣಿ ಯೋಜನೆ (OPS) ಜಾರಿ ಮಾಡುತ್ತೇನೆ ಎಂದು ತಿಳಿಸಿದರು.
ಈ ಹೇಳಿಕೆ ಪ್ರಕಟವಾದ ಬೆನ್ನಲ್ಲೇ ಸರ್ಕಾರಿ ನೌಕರರು ಖುಷಿಯಾಗಿ ಚಪ್ಪಾಳೆ ತಟ್ಟಿ ಡಿಕೆ ಡಿಕೆ…ಎಂದು ಘೋಷಣೆ ಕೂಗಲು ಆರಂಭಿಸಿದರು. ನೌಕರರ ಕಡೆಯಿಂದ ಡಿಕೆ ಡಿಕೆ ಎಂಬ ಘೋಷಣೆ ಬರುತ್ತಿದ್ದಂತೆ ಡಿಕೆಶಿ ನಾಯಕತ್ವದ ಬಾಣವನ್ನು ಬಿಟ್ಟಿದ್ದಾರೆ.
“ನೋಡ್ರಪ್ಪ ಮುಂದೆ ನಾನು ಚುನಾವಣೆಗೆ ನಿಂತಾಗ ನನ್ನ ಲೀಡರ್ಶಿಪ್ನಲ್ಲಿಯೇ ನಡೆದಾಗ ಈ ಪದ ಹೇಳಿ. ನಾನು ಬಿಟ್ಟು ಹೋಗಲ್ಲ 8-10 ವರ್ಷ ಗಟ್ಟಿಯಾಗಿ ಇರುತ್ತೇನೆ” ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಇದನ್ನೂ ಓದಿ: ಹಬ್ಬದ ಸಂಭ್ರಮದಲ್ಲಿ ಮಾರಕಾಸ್ತ್ರ ಹಿಡಿದು ಮಧ್ಯರಾತ್ರಿ ವ್ಹೀಲಿಂಗ್ ಮಾಡಿದ್ದ ಪುಂಡರು ಅರೆಸ್ಟ್
ಒಂದು ಕಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಶಿವಕುಮಾರ್ ಅವರನ್ನು ಕೆಳಗೆ ಇಳಿಸಬೇಕು ಎಂಬ ಉದ್ದೇಶದಲ್ಲಿ ದಲಿತ ಸಚಿವರು ಒಂದೊಂದೆ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದು ಕಡೆ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ಸಮಯಲ್ಲೇ ತಮ್ಮ ನಾಯಕತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎನ್ನುವ ಮೂಲಕ ಡಿಕೆಶಿ ಸಿಎಂ ಆಪ್ತರಿಗೆ ನೇರ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಡಿಕೆಶಿ ಹೇಳಿದ್ದೇನು?
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ನಾವು ಒಪಿಎಸ್ ಜಾರಿ ಮಾಡುತ್ತೇವೆ. ನೀವು ಬಿಟ್ಟರೂ ಈ ವಿಚಾರವನ್ನು ನಾವು ಬಿಡುವುದಿಲ್ಲ. ನಾನು ವಿಧಾನಸೌಧದಲ್ಲಿ ಇರುವವನೇ. ನಾನು ಇನ್ನು ಎಂಟತ್ತು ವರ್ಷ ಬಿಟ್ಟು ಹೋಗುವುದಿಲ್ಲ. ನನ್ನ ಆರೋಗ್ಯ ಇನ್ನೂ ಗಟ್ಟಿಯಾಗಿದೆ. ನನ್ನ ಮೇಲೆ ನಂಬಿಕೆಯಿಡಿ.
ನಾನು 1989 ರಿಂದ ವಿಧಾನಸಭೆಯಲ್ಲಿ ಇದ್ದೇನೆ. ಕಾರ್ಯಾಂಗದ ಭಾಗವಾಗಿ ನೀವೀದ್ದೀರಿ. ನಿಮ್ಮ ಜವಾಬ್ದಾರಿಯ ಅರಿವು ನನಗಿದೆ. ನಾನು ಕೂಡ ಬಡ ನೌಕರನಂತೆ 38 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಶಾಸಕನಾಗಿ ಸರ್ಕಾರದ ವೇತನ ಪಡೆದಿದ್ದೇನೆ. ನನಗೂ ಪಿಂಚಣಿ ಬರುತ್ತದೆ ಎಂದು ಹೇಳಿದರು.