ನಮ್ಮ ಮುಂದಿನ ಗುರಿ ಪಿಓಕೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

Public TV
1 Min Read
Jitendra Singh

ನವದೆಹಲಿ: ನಮ್ಮ ಮುಂದಿನ ಗುರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (Pakistan-occupied Kashmir -PoK) ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಖಡಕ್ ಸಂದೇಶ ರವಾನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದಿಟ್ಟತನ ತೋರಿತು. ಅದರಂತೆ ಮುಂದಿನ ದಿನಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಮತ್ತೆ ಭಾರತದ ಸುಪರ್ದಿಗೆ ತರುವ ಅಜೆಂಡಾ ಹೊಂದಿದ್ದೇವೆ. ಈ ನಿರ್ಧಾರ ನಮ್ಮ ಪಕ್ಷದ ತೀರ್ಮಾನ ಮಾತ್ರವಲ್ಲ, 1994ರಲ್ಲಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವೇಳೆ ಲೋಕಸಭೆಯಲ್ಲಿ ಇದು ಸರ್ವಾನುಮತದಿಂದ ಅಂಗೀಕಾರವಾಗಿತ್ತು ಎಂದು ತಿಳಿಸಿದರು.

ಕೇಂದ್ರ ಸಚಿವರು ಪಿಓಕೆ ಬಗ್ಗೆ ಮಾತನಾಡಿದ್ದು ಇದೇ ಮೊದಲೇನಲ್ಲ. ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಜಿತೇಂದ್ರ ಸಿಂಗ್ ಅವರು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ತೆಗೆದುಹಾಕಿದ ಬಳಿಕ ಜನರು ಪಿಓಕೆ ಭಾರತದೊಂದಿಗೆ ಸಂಯೋಜನೆಗೊಳ್ಳಬೇಕು ಅಂತ ಪ್ರಾರ್ಥಿಸಬೇಕು. ದೇಶದಲ್ಲಿ ಪಿಒಕೆ ಏಕೀಕರಣಗೊಳ್ಳುವುದನ್ನು ನಾವು ನೋಡಬೇಕು. ಮುಜಫರಾಬಾದ್‍ಗೆ ಹೋಗುವ ಜನರು ಅಡೆತಡೆಯಿಲ್ಲದೆ ಓಡಾಡುವಂತಾಗಲಿ ಎಂದು ಹೇಳಿದ್ದರು.

ಇದೇ ವಿಚಾರವಾಗಿ ಮಾತನಾಡಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತ ಮತ್ತು ಪಾಕ್ ಮಧ್ಯೆ ಮಾತುಕತೆ ನಡೆಯುವುದಾದರೆ ಅದು ಕೇವಲ ಪಾಕ್ ಆಕ್ರಮಿತ ಕಾಶ್ಮೀರದ (ಪಿಓಕೆ) ಬಗ್ಗೆ ಮಾತ್ರ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದು ಜಮ್ಮು-ಕಾಶ್ಮೀರದ ಅಭಿವೃದ್ಧಿಗಾಗಿ. ಈ ನಿರ್ಧಾರ ತಪ್ಪು ಅಂತ ಪಾಕಿಸ್ತಾನವು ವಿಶ್ವಸಂಸ್ಥೆಗೆ ದೂರು ನೀಡಿದೆ. ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಪಾಕಿಸ್ತಾನದೊಂದಿಗೆ ಭಾರತ ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *