70 ಲಕ್ಷದ ಕಾರು, 800 ಗ್ರಾಂ ಚಿನ್ನ ನೀಡಿದ ಬಳಿಕವೂ ವರದಕ್ಷಿಣೆ ಕಿರುಕುಳ – ನವವಿವಾಹಿತೆ ಆತ್ಮಹತ್ಯೆ

Public TV
2 Min Read
Tamilnadu Newlywed bride Suicide by dowry harassement

– ಕೊನೆಯ ಉಸಿರಿನವರೆಗೂ ನೀನೇ ನನ್ನ ಭರವಸೆಯಾಗಿದ್ದೆ ಅಪ್ಪ ಎಂದು ಲಾಸ್ಟ್ ವಾಯ್ಸ್ ಮೆಸೇಜ್

ಚೆನ್ನೈ: 70 ಲಕ್ಷ ರೂ. ಮೌಲ್ಯದ ಕಾರು, 800 ಗ್ರಾಂ ಚಿನ್ನ ನೀಡಿದ ಬಳಿಕವೂ ವರದಕ್ಷಿಣೆಗಾಗಿ ಪತಿಯ ಮನೆಯವರು ನೀಡುತ್ತಿದ್ದ ಕಿರುಕುಳ ತಾಳಲಾಗದೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ (Tamil Nadu) ತಿರುಪ್ಪೂರಿನಲ್ಲಿ (Tiruppur) ನಡೆದಿದೆ.

ಮೃತ ಮಹಿಳೆಯನ್ನು ರಿಧನ್ಯಾ (27) ಎಂದು ಗುರುತಿಸಲಾಗಿದ್ದು, ಗಾರ್ಮೆಂಟ್ಸ್ ಕಂಪನಿಯನ್ನು ನಡೆಸುತ್ತಿರುವ ಅಣ್ಣಾದೊರೈ ಅವರ ಮಗಳು ಎಂದು ತಿಳಿಯಲಾಗಿದೆ.ಇದನ್ನೂ ಓದಿ: ಹಾಸನ ಯುವಜನತೆಯಲ್ಲಿ ಹೃದಯಾಘಾತ – ತನಿಖೆಗೆ ವಿಶೇಷ ಸಮಿತಿ ರಚಿಸಿದ ಸರ್ಕಾರ

ಪೊಲೀಸರ ಮಾಹಿತಿ ಪ್ರಕಾರ, ಕಳೆದ ಏಪ್ರಿಲ್‌ನಲ್ಲಿ ರಿಧನ್ಯಾ ಹಾಗೂ ಕವಿನ್ ಕುಮಾರ್ (28) ಮದುವೆಯಾಗಿದ್ದರು. ಭಾನುವಾರದಂದು ರಿಧನ್ಯಾ ಮೊಂಡಿಪಾಳ್ಯಂದಲ್ಲಿರುವ (Mondipalayam) ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ, ಮನೆಯಿಂದ ಹೊರಟಿದ್ದರು. ಬಳಿಕ ಮಾರ್ಗಮಧ್ಯೆ ಕಾರು ನಿಲ್ಲಿಸಿ, ಕೀಟನಾಶ ಸೇವಿಸಿದ್ದಾರೆ. ಬಹಳ ಹೊತ್ತಿನಿಂದ ಒಂದೇ ಪ್ರದೇಶದಲ್ಲಿ ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದಾಗ ಆಕೆಯ ಶವ ಪತ್ತೆಯಾಗಿದೆ. ಜೊತೆಗೆ ಬಾಯಿಯಲ್ಲಿ ನೊರೆ ಬಂದಿರುವುದನ್ನು ಕಂಡು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೂಲಗಳ ಪ್ರಕಾರ, ರಿಧನ್ಯಾ ಸಾಯುವ ಮುನ್ನ ತನ್ನ ತಂದೆಗೆ ವಾಟ್ಸಾಪ್‌ನಲ್ಲಿ ಏಳು ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಿದ್ದರು, ಮೆಸೇಜ್‌ನಲ್ಲಿ ನನ್ನ ಈ ನಿರ್ಧಾರಕ್ಕಾಗಿ ಕ್ಷಮಿಸಿ, ಪ್ರತಿದಿನ ನನ್ನ ಪತಿ, ಅತ್ತೆ ಹಾಗೂ ಮಾವ ನೀಡುತ್ತಿರುವ ಕಿರುಕುಳ ತಾಳಲಾಗದೇ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ಇದೆಲ್ಲದರ ಬಗ್ಗೆ ಯಾರಿಗಾದರೂ ಹೇಳೋಣ ಎಂದರೆ, ಜೀವನವೆಂದರೆ ಹೀಗೆ ಇರುತ್ತೆ, ನೀನೇ ಎಲ್ಲದಕ್ಕೂ ಹೊಂದಿಕೊಂಡು ಹೋಗಬೇಕು ಎಂದು ಹೇಳುತ್ತಾರೆ. ಆದರೆ ನನ್ನ ನೋವು ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ನಾನು ನಿಮಗೆ ಸುಳ್ಳು ಹೇಳುತ್ತಿದ್ದೇನೆ ಎನ್ನಿಸಬಹುದು, ಆದರೆ ಇದು ಸುಳ್ಳಲ್ಲ. ಎಲ್ಲರೂ ನಾಟಕವಾಡುತ್ತಿದ್ದಾರೆ, ಅದಕ್ಕಾಗಿ ನಾನು ಮೌನವಾಗಿದ್ದೇನೆ. ಇದೆಲ್ಲವನ್ನು ನೋಡುತ್ತಾ ನನಗೆ ಬದುಕಲು ಸಾಧ್ಯವಿಲ್ಲ ಅಪ್ಪ ಎಂದು ಹೇಳಿದ್ದಾರೆ.

ಈ ನರಕವನ್ನು ಬಿಟ್ಟು ನಿಮ್ಮ ಬಳಿ ಬರಬೇಕೆಂದರೆ, ಜೀವನಪೂರ್ತಿ ನಿಮಗೆ ಹೊರೆಯಾಗಿ ಬದುಕಲು ನನಗೆ ಇಷ್ಟವಿಲ್ಲ. ನನ್ನ ಪತಿ ದೈಹಿಕವಾಗಿ ಕಿರುಕುಳ ನೀಡಿದರೆ, ಅತ್ತೆ, ಮಾವ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ನಾನು ಯಾವ ತಪ್ಪು ಮಾಡಿಲ್ಲ. ಈ ಜೀವನ ನನಗೆ ಬೇಡ ಅಪ್ಪ. ಇದೇ ರೀತಿ ಈ ನರಕದಲ್ಲಿ ನನಗೆ ಬದುಕಲು ಆಗುವುದಿಲ್ಲ. ಆದರೆ ನೀನು ಮತ್ತು ಅಮ್ಮ ನನ್ನ ಪ್ರಪಂಚ. ಕೊನೆಯ ಉಸಿರಿನವರೆಗೂ ನೀನೇ ನನ್ನ ಭರವಸೆಯಾಗಿದ್ದೆ, ನನ್ನಿಂದ ನಿನಗೆ ತುಂಬಾ ನೋವಾಗಿದೆ. ನೀನು ಅದನ್ನು ಹೇಳುವುದಿಲ್ಲ. ಆದರೆ ನನ್ನನ್ನು ಈ ಸ್ಥಿತಿಯಲ್ಲಿ ನಿನಗೆ ನೋಡಲು ಸಾಧ್ಯವಾಗುವುದಿಲ್ಲ. ನಿಮ್ಮ ನೋವು ನನಗೆ ಅರ್ಥವಾಗುತ್ತೆ. ಕ್ಷಮಿಸಿ ಅಪ್ಪಾ, ಎಲ್ಲವೂ ಮುಗಿದಿದೆ. ನಾನು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸದ್ಯ ರಿಧನ್ಯಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯ ಪತಿ ಕವಿನ್ ಕುಮಾರ್, ಮಾವ ಈಶ್ವರಮೂರ್ತಿ ಮತ್ತು ಅತ್ತೆ ಚಿತ್ರಾದೇವಿಯನ್ನು ಬಂಧಿಸಿ, ವಿಚಾಣೆ ನಡೆಸುತ್ತಿದ್ದಾರೆ. ಇನ್ನೂ ಮದುವೆಯ ವೇಳೆ 70 ಲಕ್ಷ ರೂ. ಮೌಲ್ಯದ ವೋಲ್ವೋ ಕಾರು, 800 ಗ್ರಾಂ ಚಿನ್ನ ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಆಕೆಯ ಕುಟುಂಬಸ್ಥರು ನ್ಯಾಯಕ್ಕಾಗಿ ಒತ್ತಾಯಿಸಿ ಆಸ್ಪತ್ರೆಯ ಮುಂದೆ ಪ್ರತಿಭಟಿಸುತ್ತಿದ್ದಾರೆ.ಇದನ್ನೂ ಓದಿ: ಕೋಲ್ಕತ್ತಾ ಗ್ಯಾಂಗ್‌ ರೇಪ್ ಕೇಸ್ – ವಿದ್ಯಾರ್ಥಿನಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share This Article