ಹಾಸನ: ಮನೆಯವರಿಗೆಲ್ಲಾ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ನವವಿವಾಹಿತೆಯೊಬ್ಬಳು ಮದುವೆಯಾದ ಐದೇ ದಿನಕ್ಕೆ ಪರಾರಿಯಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಂತನಮನೆ ಗ್ರಾಮದಲ್ಲಿ ನಡೆದಿದೆ.
ಡಿಸೆಂಬರ್ 6 ರಂದು ಸಕಲೇಶಪುರ ತಾಲೂಕಿನ ಹಾನುಬಾಳು ಸಮೀಪದ ಹಾದಿಗೆ ಗ್ರಾಮದ ಕುಸುಮಾಳನ್ನ ಮೋಹನ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಯುವತಿಯ ತಂದೆ ಹಾಗೂ ತಾಯಿ ಮೃತಪಟ್ಟಿದ್ದು, ಕೂಲಿ ಕೆಲಸ ಮಾಡುತ್ತಿದ್ದ ಸೋದರಮಾವ ನೀಲರಾಜ್ ಈಕೆಯನ್ನು ಬೆಳಸಿ ಪಿಯುಸಿವರೆಗೂ ಓದಿಸಿದ್ದರು. ಇವರೇ ಮುಂದೆ ನಿಂತು ಮದುವೆ ಮಾಡಿದ್ದರು.
ಕುಸುಮಾ ಮದುವೆಯಾದ ಒಂದು ವಾರಕ್ಕೆ ಮನೆಯವರಿಗೆಲ್ಲಾ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಪರಾರಿಯಾಗಿದ್ದಾಳೆ. ಎರಡು ದಿನಗಳ ಬಳಿಕ ಪೊಲೀಸರ ಎದುರು ಬಂದು ಈ ಮದುವೆ ನನಗೆ ಇಷ್ಟವಿರಲಿಲ್ಲ. ಮನೆಯವರು ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಿದ್ದಾರೆ ಎಂದು ತನ್ನ ಪತಿ ಹಾಗೂ ಸೋದರಮಾವನ ವಿರುದ್ಧ ದೂರು ನೀಡಿದ್ದಾಳೆ.
ಹುಡುಗಿಗೆ ತಂದೆ ತಾಯಿ ಇಲ್ಲದಿದ್ದರಿಂದ ಸ್ವತಃ ನಾನೇ ಮುಂದೆ ನಿಂತು ಆಕೆಯ ಒಪ್ಪಿಗೆ ಪಡೆದೆಯೇ ಈ ಮದುವೆ ಮಾಡಿಸಿದ್ದೇನೆ. ಹುಡುಗ ಒಳ್ಳೆಯವನೇ, ಹಿನ್ನೆಲೆಯನ್ನು ವಿಚಾರಿಸಿದ್ದೇನೆ. ಮದುವೆ ಮಾಡುವಾಗ ಖುಷಿಯಾಗಿಯೇ ಇದ್ದಳು. ಆದರೆ ಯಾಕೆ ಈ ರೀತಿ ನನ್ನ ವಿರುದ್ಧವೇ ದೂರು ನೀಡಿದ್ದಾಳೆ ಎಂಬುವುದು ತಿಳಿಯದಾಗಿದೆ ಎಂದು ಹುಡುಗಿಯ ಮಾವ ಹೇಳುತ್ತಿದ್ದಾರೆ.
ವಧು ಮಧ್ಯರಾತ್ರಿ ನಾಪತ್ತೆಯಾಗಿದ್ದಾಳೆ. ನಮಗೆ ನ್ಯಾಯ ಕೊಡಿಸಿ ಎಂದು ವರನ ಕಡೆಯವರು ಪ್ರತಿದೂರು ನೀಡಿದ್ದಾರೆ. ಮದುವೆ ಆದ ಐದೇ ದಿನಕ್ಕೆ ಈ ರೀತಿ ಮಾಡಿದ್ದಾಳೆ. ಯುವತಿ ಬಗ್ಗೆ ಪೊಲೀಸರಿಗೆ ಎಲ್ಲ ಮಾಹಿತಿ ನೀಡಿದ್ದೇವೆ. ನಮಗೆ 5 ಲಕ್ಷ ರೂ. ನಷ್ಟವಾಗಿದೆ ಎಂದು ಪತಿ ದೂರಿದ್ದಾರೆ.
ಎರಡೂ ಕುಟುಂಬದವರ ಜೊತೆ ಪೊಲೀಸರು ಸಮಾಲೋಚನೆ ನಡೆಸಿದ್ದು, ಹೆಚ್ಚಿನ ವಿಚಾರಣೆಗಾಗಿ ಮಕ್ಕಳ ಆಪ್ತ ಸಮಾಲೋಚನೆ ಕೇಂದ್ರಕ್ಕೆ ಕಳುಹಿಸಿದ್ದರು. ಆದರೆ ಹುಡುಗಿ ಆಪ್ತಸಮಾಲೋಚನೆ ವೇಳೆ ತಾನು ಬೇರೊಬ್ಬ ಹುಡುಗನನ್ನ ಪ್ರೀತಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾಳೆ. ಈ ವಿಚಾರ ತಿಳಿದ ವರನ ಮನೆಯವರಿಗೆ ಹಾಗೂ ಆಕೆಯ ಸೋದರ ಮಾವನಿಗೆ ಬರಸಿಡಿಲು ಬಡಿದಂತಾಗಿದೆ. ಸದ್ಯಕ್ಕೆ ಹುಡುಗಿ ಸಕಲೇಶಪುರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.