ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‍ಗೆ ರಾಜ್ಯದ ಜನ ಬೆಚ್ಚಿ ಬಿದ್ದಿದ್ದಾರೆ. ಟ್ರಾವೆಲ್ಸ್ ಏಜೆನ್ಸಿಗಳನ್ನು ಈ ಸೈತಾನ್ ವೈರಸ್ ಕಾಡುತ್ತಿದೆ. ಹೊಸದಾಗಿ ಮದುವೆಯಾದ ಜೋಡಿಗಳು ಹನಿಮೂನ್‍ಗೆ ಹೊರ ರಾಷ್ಟ್ರಗಳಿಗೆ ಹೋಗೋದಕ್ಕೆ ಭಯಪಡುತ್ತಿದ್ದಾರೆ.
ಚೀನಾದ ಕೊರೊನಾ ವೈರಸ್‍ನ ಭೀತಿ ರಾಜ್ಯದಲ್ಲಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರಿಗೆ ಸೊಂಕು ತಗುಲಿರುವ ಬಗ್ಗೆ ಖಚಿತ ಆಗುತ್ತಿದ್ದಂತೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿಲಾಗಿದೆ. ಅಲ್ಲದೆ ಹೊರ ರಾಷ್ಟ್ರಗಳಿಗೆ ಹೋಗಲು ಜನ ಭಯಪಡುತ್ತಿದ್ದಾರೆ. ಮುಖ್ಯವಾಗಿ ಹೊಸದಾಗಿ ಮದುವೆಯಾಗಿ ಹನಿಮೂನ್‍ಗೆ ಹೋಗುವ ಜೋಡಿಗಳು ಕೊರೊನಾ ವೈರಸ್‍ಗೆ ಭಯ ಪಟ್ಟಿದ್ದು, ಹನಿಮೂನ್ ಪ್ಲಾನ್ ಅನ್ನು ಮುಂದಕ್ಕೆ ಹಾಕಿಕೊಂಡಿದ್ದಾರೆ. ಈ ಪೋಸ್ಟ್‌ಪೋನ್ ಸಂಕಟದಿಂದ ಟ್ರಾವೆಲ್ ಏಜೆನ್ಸಿಗಳಿಗೆ ಭಾರೀ ಹೊಡೆತ ಬಿದ್ದಿದೆ.
ಕೊರೊನಾ ಭಯಕ್ಕೆ ಯಾರು ಕೂಡ ಹೊರ ರಾಷ್ಟ್ರಗಳಿಗೆ ಹೋಗುತ್ತಿಲ್ಲ. ಅಡ್ವಾನ್ಸ್ ಆಗಿ ಬುಕ್ ಮಾಡಿರುವವರು ಕೂಡ ದಿನಾಂಕವನ್ನು ಪೋಸ್ಟ್‌ಪೋನ್ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ದುಬೈ, ಸಿಂಗಾಪುರ್, ಹಾಂಕಾಂಗ್, ಥೈಲ್ಯಾಂಡ್, ಅಮೆರಿಕ ರಾಷ್ಟ್ರಗಳಿಗೆ ಈ ಸೀಸನ್‍ನಲ್ಲಿ ಹೆಚ್ಚಿನ ಜನ, ವಿದೇಶ ಪ್ರವಾಸ ಮಾಡುತ್ತಿದ್ದರು. ಆದರೆ ಕೊರೊನಾ ಭೂತಕ್ಕೆ ಇದೀಗ ಹೊರ ರಾಷ್ಟ್ರಗಳಿಗೆ ಹೋಗೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಟ್ರಾವೆಲ್ಸ್ ಏಜೆನ್ಸಿಗಳಿಗೆ ದಿನಕ್ಕೆ ಲಕ್ಷಾಂತರ ರೂ. ನಷ್ಟವಾಗ್ತಿದೆ.
ನಿತ್ಯ ಟ್ರಾವೆಲ್ಸ್ ಅಂಗಡಿಗಳಲ್ಲಿ ಜನ, ಕ್ಯೂ ನಿಂತು ಹೊರ ರಾಷ್ಟ್ರಗಳ ಫ್ಲೈಟ್ ಟಿಕೆಟ್ ಅನ್ನು ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಟ್ರಾವೆಲ್ಸ್ ಬುಕ್ಕಿಂಗ್ ಸೆಂಟರ್ ಗಳು ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿದೆ. ಕೊರೊನಾ ಕಂಟಕ ಕರುನಾಡಿಗೂ ವ್ಯಾಪಿಸಿದೆ. ಮದುವೆಯ ಹೊಸತರಲ್ಲಿ ಸ್ವಚ್ಚಂದವಾಗಿ ಹನಿಮೂನ್‍ನಲ್ಲಿ ಬ್ಯೂಸಿ ಇರಬೇಕಾದ ಜೋಡಿಗಳು ಸದ್ಯಕ್ಕೆ ಎಲ್ಲಿ ಹೋಗೋದು ಬೇಡಪ್ಪ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.