Crime
ವಿಶ್ವವಿದ್ಯಾಲಯದ ಆವರಣದಲ್ಲಿ ನವವಿವಾಹಿತ ಜೋಡಿ ಶವವಾಗಿ ಪತ್ತೆ!

– ಪ್ರಕರಣದ ಬಗ್ಗೆ ಭಾರೀ ಅನುಮಾನ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ ಭುಮ್ ಜಿಲ್ಲೆಯಲ್ಲಿರುವ ವಿಶ್ವಭಾರತೀ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನವ-ವಿವಾಹಿತ ಜೋಡಿಯ ಶವ ಪತ್ತೆಯಾಗಿದ್ದು, ಭಾರೀ ಅನುಮಾನಕ್ಕೀಡುಮಾಡಿದೆ.
ಮೃತರನ್ನು 18 ವರ್ಷದ ಸೊಮಂತ್ ಮಹಾತೋ ಹಾಗೂ 19 ವರ್ಷದ ಅಬಂತಿಕಾ ಎಂದು ಗುರುತಿಸಲಾಗಿದೆ ಅಂತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜೋಡಿಯ ಮೃತದೇಹ ಶನಿವಾರ ಕ್ಯಾಂಪಸ್ ಚೀನಾ ಭಾಷೆಯ ಅಧ್ಯಯನ ಕೇಂದ್ರದಲ್ಲಿ ದೊರೆತಿದ್ದು, ಇದೀಗ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಶುಕ್ರವಾರ ರಾತ್ರಿ ಈ ಜೋಡಿ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗುತ್ತಿದ್ದು, ಆದರೆ ಮಧ್ಯರಾತ್ರಿ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಹೇಗೆ ಬಂದರು ಎಂಬುದು ಭಾರೀ ಚರ್ಚೆಗೀಡಾಗಿದೆ.
ಮೃತರಿಬ್ಬರು ಬೋಲ್ಪುರದ ಶ್ರೀನಂದಾ ಹೈಸ್ಕೂಲಿನ ವಿದ್ಯಾರ್ಥಿಗಳಾಗಿದ್ದಾರೆ. ಸೊಮಂತ್ ಪಿಯುಸಿ ಮುಗಿಸಿದ್ದರೆ, ಅಬಂತಿಕಾ 10 ನೇ ತರಗತಿ ಮುಗಿಸಿದ್ದಾಳೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆ ಬಳಿಕವಷ್ಟೇ ಇದು ಆತ್ಮಹತ್ಯೆಯೋ ಅಲ್ವೋ ಎಂಬುದು ಬೆಳಕಿಗೆ ಬರಬೇಕಿದೆ ಎಂದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸೆಕ್ಯೂರಿಟಿಯವರು ಎಂದಿನಿಂತೆ ಚೀನಾ ಭವನದ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಇಬ್ಬರ ಮೃತದೇಹವಿರುವುದು ಕಂಡು ಬಂದಿದೆ. ಕೂಡಲೇ ಅವರು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಪ್ರಕರಣ ಸಂಬಂಧ ಅವರು ರಾತ್ರೋರಾತ್ರಿ ವಿಶ್ವವಿದ್ಯಾಲಯದ ಒಳಗೆ ಹೇಗೆ ಬಂದರು ಎಂಬುದರ ಬಗ್ಗೆ ಮೊದಲು ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
