– ಯುವಕನ ಸ್ಥಿತಿ ಗಂಭೀರ
ಮಂಡ್ಯ: ಓವರ್ ಟೇಕ್ ಮಾಡುವ ವೇಳೆ ಟೈಲ್ಸ್ ತುಂಬಿದ್ದ ಲಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಯುವಕನ ಸ್ಥಿತಿ ಗಂಭೀರವಾಗಿರುವ ಘಟನೆ ಮಂಡ್ಯ ತಾಲೂಕಿನ ಯಲಿಯೂರು ಸಮೀಪ ತಡರಾತ್ರಿ ನಡೆದಿದೆ.
ಸಹನಾ (19) ಮೃತ ಯುವತಿ. ದರ್ಶನ್ (24) ಸ್ಥಿತಿ ಗಂಭೀರವಾಗಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಸಹನಾ ಮತ್ತು ದರ್ಶನ್ ನಾಲ್ಕು ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.
ಬೈಕಿನಲ್ಲಿ ಇಬ್ಬರು ಹೋಗುತ್ತಿದ್ದರು. ಆದರೆ ಯಲಿಯೂರು ಸಮೀಪ ಓವರ್ ಟೇಕ್ ಮಾಡುವ ವೇಳೆ ಟೈಲ್ಸ್ ತುಂಬಿದ್ದ ಲಾರಿಗೆ ಡಿಕ್ಕಿಯಾಗಿದೆ. ಬಳಿಕ ಅವರ ಮೇಲೆ ಕೆಎಸ್‍ಆರ್ ಟಿಸಿ ಬಸ್ ಹರಿದಿದೆ. ಪರಿಣಾಮ ಸಹನ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಇನ್ನೂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದರ್ಶನ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರೂ ರಾಮನಗರ ಮೂಲದವರಾಗಿದ್ದು, ಎರಡು ತಿಂಗಳ ಹಿಂದೆ ಇಬ್ಬರೂ ನಾಪತ್ತೆಯಾಗಿದ್ದರು. ಆದರೆ 4 ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿರೋದಾಗಿ ರಾಮನಗರ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ಬಿಡುಗಡೆಯಾಗಿದ್ದರು. ಈ ಘಟನೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv