Monday, 19th August 2019

Recent News

ಪ್ರೀತಿಸಿ ಮದ್ವೆಯಾಗಿ, ಏಳೇ ತಿಂಗಳಿಗೆ ನವದಂಪತಿ ಆತ್ಮಹತ್ಯೆ-ಡೆತ್ ನೋಟ್ ನಲ್ಲಿ ಮನಕಲಕುವ ಮಾತು

ಮುಂಬೈ: ಏಳು ತಿಂಗಳ ಹಿಂದೆ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ನವದಂಪತಿ, ಜೊತೆಯಾಗಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಧೂಲೆ ಜಿಲ್ಲೆಯ ಥಾಡಣೆ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ನವದಂಪತಿಗಳನ್ನು ಸಚಿನ್ ಬಾಗುಲ್, ದಿಪಾಲಿ ಚವ್ಹಾನ್ ಎಂದು ಗುರುತಿಸಲಾಗಿದೆ.

ಮೃತರಿಬ್ಬರು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಸಚಿನ್ ಹಾಗೂ ದಿಪಾಲಿ ಇಬ್ಬರು ಬೇರೆ ಬೇರೆ ಜಾತಿಗೆ ಸೇರಿದ ಕಾರಣದಿಂದ ಇಬ್ಬರ ಮದುವೆಗೆ ಕುಟುಂಬ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅದರೂ ಕಳೆದ ಮೇ 4 ರಂದು ಸ್ನೇಹಿತರ ಸಹಾಯದಿಂದ ಯಾರಿಗೂ ತಿಳಿಯದಂತೆ ವಿವಾಹವಾಗಿದ್ದರು.

ಮದುವೆಯಾದ ಬಳಿಕ ಇಬ್ಬರೂ ತಮ್ಮ ಮನೆಯಲ್ಲಿ ಯಾವುದೇ ವಿಷಯವನ್ನು ತಿಳಿಸದೇ, ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಆದರೂ ಪೋಷಕರಿಗೆ ಮೂರನೇ ವ್ಯಕ್ತಿಯಿಂದಾಗಿ ಮಕ್ಕಳ ಮದುವೆ ವಿಷಯ ಗೊತ್ತಾಗಿತ್ತು. ವಿವಾಹದ ನಂತರ ಕುಟುಂಬ ಸದಸ್ಯರಿಗೆ ಮಾಹಿತಿ ತಿಳಿದು ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಬ್ಬರಿಗೂ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಕುರಿತು ಪತ್ರ ಬರೆದಿರುವ ನವದಂಪತಿ, ಇಬ್ಬರನ್ನು ಒಂದಾಗಿ ಜೀವನ ನಡೆಸಲು ನಮ್ಮ ಕುಟುಂಬಗಳು ಬಿಡುತ್ತಿಲ್ಲ. ಬೇರೆ ಮಾಡಲು ಪ್ರಯತ್ನಿಸಿ ಒತ್ತಡ ಹಾಕುತ್ತಿದ್ದಾರೆ. ಕುಟುಂಬ ಸದ್ಯಸರ ಒತ್ತಡವನ್ನು ತಡೆಯಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ, ಕೊನೆಗೆ ಪೋಷಕರಿಗೆ ನೀವಾದರೂ ಚೆನ್ನಾಗಿರಿ ಎಂದು ಮನಕಲಕುವ ಸಾಲುಗಳನ್ನು ಬರೆದಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ತಾವು ವಾಸಿಸುತ್ತಿರುವ ಗ್ರಾಮ ಹೊರವಲಯದಲ್ಲಿರುವ ಮರಕ್ಕೆ ನವದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಮೃತ ದೇಹಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನವದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಧವಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *