ಸಿಎಂ ಭೇಟಿಯಾಗಿ ಬೇಡಿಕೆಗಳನ್ನು ಮುಂದಿಟ್ಟ ನೂತನ ಶಾಸಕರು

Public TV
2 Min Read
BSY

– 17 ಮಂದಿಯೂ ಒಟ್ಟಿಗಿದ್ದೇವೆ ಅಂದ್ರು ಎಸ್‍ಟಿಎಸ್

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಇಂದು ಬೆಳಗ್ಗೆ ಉಪಚುನಾವಣೆಯಲ್ಲಿ ಗೆದ್ದ ಶಾಸಕರು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.

ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಉಳಿದ ಶಾಸಕರಾದ ಎಸ್ ಟಿ ಸೋಮಶೇಖರ್, ಡಾ.ಕೆ.ಸುಧಾಕರ್, ಬಿ ಸಿ ಪಾಟೀಲ್, ಮಹೇಶ್ ಕುಮಟಳ್ಳಿ, ಬೈರತಿ ಬಸವರಾಜು, ಗೋಪಾಲಯ್ಯ ಭೇಟಿ ಕೊಟ್ಟಿದ್ದಾರೆ. ಇವರ ಜೊತೆ ಪರಾಜಿತ ಅಭ್ಯರ್ಥಿ ಎಚ್ ವಿಶ್ವನಾಥ್, ಅನರ್ಹ ಶಾಸಕರಾದ ಮುನಿರತ್ನ, ಪ್ರತಾಪ್ ಗೌಡ ಪಾಟೀಲ್ ಸಹ ಆಗಮಿಸಿದರು.

BSY 3

ಹುಣಸೂರು ಉಪಚುನಾವಣೆ ಸೋಲಿನ ಬಳಿಕ ಮೊದಲ ಬಾರಿಗೆ ಎಚ್ ವಿಶ್ವನಾಥ್ ಸಿಎಂ ಅವರನ್ನು ಭೇಟಿ ಮಾಡಿದರು. ಜೆಡಿಎಸ್ ಉಚ್ಛಾಟಿತ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಸಿಎಂ ನಿವಾಸಕ್ಕೆ ಬಂದರು. ಇದೇ ಸಂದರ್ಭದಲ್ಲಿ ತಮ್ಮ ಗೆಲುವಿಗೆ ಶ್ರಮಿಸಿದ ಮುಖ್ಯಮಂತ್ರಿಗಳಿಗೆ ನೂತನ ಶಾಸಕರು ಅಭಿನಂದಿಸಿ ಸನ್ಮಾನಿಸಿದರು. ಇದೇ ವೇಳೆ ಮಂಗಳವಾರದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಸಿಎಂಗೆ ರಮೇಶ್ ಜಾರಕಿಹೊಳಿ ತಿಳಿಸಿದರು.

ಗೆದ್ದವರ ಬೇಡಿಕೆಗಳೇನು?
ಗೆದ್ದವರೆಲ್ಲರಿಗೂ ಸಚಿವ ಸ್ಥಾನ ಮತ್ತು ಪ್ರಮುಖ ಖಾತೆಗಳು ಕೊಡಬೇಕು. ಹಾಗೆಯೇ ಸೋತವರಿಗೂ ಸಚಿವ ಸ್ಥಾನ ಅಥವಾ ಸೂಕ್ತ ಸ್ಥಾನಮಾನ ನೀಡಬೇಕು. ಮುನಿರತ್ನ ಮತ್ತು ಪ್ರತಾಪ್ ಗೌಡ ಪಾಟೀಲ್ ವಿರುದ್ಧ ದೂರುಗಳನ್ನು ವಾಪಸ್ ಪಡೆಯಬೇಕು. ಅಲ್ಲದೆ ಅವರಿಬ್ಬರ ಕ್ಷೇತ್ರಗಳಿಗೆ ಬೇಗ ಚುನಾವಣೆ ಆಗುವಂತೆ ನೋಡಿಕೊಳ್ಳಬೇಕು. ಜೊತೆಗೆ ಅವರಿಬ್ಬರಿಗೂ ಎರಡು ಸಚಿವ ಸ್ಥಾನಗಳನ್ನು ಕಾಯ್ದಿರಿಸಬೇಕು. ಹೀಗೆ ಹಲವು ಬೇಡಿಕೆಗಳನ್ನು ನೂತನ ಶಾಸಕರು ಸಿಎಂ ಎದುರು ಇಟ್ಟಿದ್ದಾರೆ. ಸುಮಾರು ಒಂದು ಗಂಟೆ ಕಾಲದ ಚರ್ಚೆಯ ಬಳಿಕ ಸಿಎಂ ಜೊತೆ ಮಾತುಕತೆ ಮುಗಿಸಿ ಶಾಸಕರು ಹೊರಟಿದ್ದಾರೆ.

BSY 2

ಸಿಎಂ ಜೊತೆಗಿನ ಸಭೆ ನಂತರ ಮಾತನಾಡಿದ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್, ಸಚಿವ ಸ್ಥಾನ ಮತ್ತು ಖಾತೆಗಳ ವಿಚಾರದಲ್ಲಿ ಬಿಜೆಪಿ ಶಾಸಕರ ಜೊತೆ ನಾವು ಯಾವುದೇ ರೀತಿಯ ಸ್ಪರ್ಧೆಗೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಅಮಿತ್ ಶಾ ಭೇಟಿ ಮಾಡಬೇಕಿದೆ ಆದರೆ ಲೋಕಸಭೆ ಕಲಾಪ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ಸಾಧ್ಯವಿಲ್ಲ. ಅಧಿವೇಶನ ಮುಗಿದ ನಂತರ ಭೇಟಿ ಮಾಡಿಸುವುದಾಗಿ ಸಿಎಂ ತಿಳಿಸಿದ್ದಾರೆ ಎಂದರು.

ಮುನಿರತ್ನ ಅವರ ಆರ್.ಆರ್.ನಗರ ಮತ್ತು ಮಸ್ಕಿ ಕ್ಷೇತ್ರಗಳ ಸಮಸ್ಯೆ ಪರಿಹರಿಸಲು ಮನವಿ ಮಾಡಿದ್ದೇವೆ. ಆದರೆ ಸಚಿವ ಸಂಪುಟದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಎಲ್ಲರೂ ಸೇರಿ ಮುಖ್ಯಮಂತ್ರಿಗಳ ಜೊತೆ ಉಪಹಾರಕ್ಕೆ ಬಂದಿದ್ದೇವೆ. ಜೊತೆಗೆ ನಮ್ಮ ಪರ ಅವಿರತ ಪ್ರಚಾರ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇವೆ ಎಂದರು.

BSY 1

ಸೋತವರನ್ನು ಏನು ಮಾಡಬೇಕು ಎಂದು ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆದರೆ ಅವರನ್ನು ಕೂಡ ಜೊತೆಗೆ ಸೇರಿಸಿಕೊಂಡು ಹೋಗುತ್ತೇವೆ. ನಾವು ಎಲ್ಲರೂ ಒಟ್ಟಿಗೆ ಇದ್ದೇವೆ. ಯಾರನ್ನು ಕೂಡ ಬಿಡುವ ಪ್ರಶ್ನೆಯೇ ಇಲ್ಲ 17 ಜನ ಒಟ್ಟಿಗೆ ಇದ್ದೇವೆ. ನಿಮ್ಮ ಸಹಕಾರಕ್ಕೆ ನಾವಿದ್ದೇವೆ. ನಮ್ಮ ಸರಕಾರಕ್ಕೆ ನೀವು ಇರಬೇಕು ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇವೆ ಎಂದು ಸೋಮಶೇಖರ್ ತಿಳಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *