ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪುವ ಭೀತಿಯಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ದೆಹಲಿಯಲ್ಲಿ ಮತ್ತೆ ಲಾಬಿ ಆರಂಭಿಸಿದ್ದಾರೆ. ನವದೆಹಲಿಯಲ್ಲಿ ಇಂದು ಸೋನಿಯಾ ಗಾಂಧಿ ಆಪ್ತ ಎಐಸಿಸಿ ಖಜಾಂಚಿ ಅಹ್ಮದ್ ಪಟೇಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಭೇಟಿಯಾಗುವ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಘೋಷಣೆ ವಿಳಂಬವಾಗುತ್ತಿದ್ದು ಈ ನಡುವೆ ಸಿದ್ದರಾಮಯ್ಯ ಬಣ ಡಿ.ಕೆ ಶಿವಕುಮಾರ್ ನೇಮಕಕ್ಕೆ ಅಡ್ಡಗಾಲು ಹಾಕಿದೆ. ಇದರಿಂದ ಆತಂಕಕ್ಕೆ ಈಡಾಗಿರುವ ಕನಕಪುರದ ಬಂಡೆ ಮಧ್ಯಪ್ರದೇಶದ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದರು. ಅಲ್ಲಿಂದ ಗುರುವಾರ ರಾತ್ರಿ ದೆಹಲಿಗೆ ಆಗಮಿಸಿದ್ದಾರೆ.
ಶುಕ್ರವಾರ ಮತ್ತು ಶನಿವಾರ ವರಿಷ್ಠರ ನಾಯಕರ ಭೇಟಿಗೆ ಪ್ರಯತ್ನ ಮಾಡಿದ್ದಾರೆ. ಎಐಸಿಸಿ ಕಚೇರಿಯಲ್ಲಿ ವೇಣುಗೋಪಾಲ್ ಭೇಟಿಯಾಗಿ ಡಿಕೆಶಿ ಸುಮಾರು 20 ನಿಮಿಷ ಮಹತ್ವದ ಚರ್ಚೆ ನಡೆಸಿದ್ದಾರೆ. ಅಲ್ಲದೆ ಪಟ್ಟಿಯಿಂದ ತಮ್ಮನ್ನು ಕೈ ಬಿಡದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸಭೆ ಬಳಿಕ ಮಾತನಾಡಿದ ಡಿಕೆಶಿ, ಇದು ಸೌಜನ್ಯದ ಭೇಟಿ ಅಷ್ಟೇ. ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾದ ಹಿನ್ನೆಲೆಯಲ್ಲಿ ಭೇಟಿ ಮಾಡಿದೆ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಕೆಪಿಸಿಸಿ ಹುದ್ದೆ ಬಗ್ಗೆಯೂ ಚರ್ಚೆ ಮಾಡಿಲ್ಲ. ಪಕ್ಷದ ಬೆಳವಣಿಗೆಗಳ ಬಗ್ಗೆ ಬೇರೆಯವರು ನೋಡಿಕೊಳ್ಳುತ್ತಾರೆ. ಯಾವ ಗುಡ್ ನ್ಯೂಸ್, ಬ್ಯಾಡ್ ನ್ಯೂಸ್ ಕೂಡ ಇಲ್ಲ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದರು.