ನವದೆಹಲಿ: ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಇಂದು ಮಹತ್ವ ದಿನವಾಗಿದೆ. ಜಾಮೀನು ಕೋರಿ ದೆಹಲಿ ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿ ಇಂದು ವಿಚಾರಣೆ ಬರಲಿದೆ.
ಹೌದು. ಅಕ್ರಮ ಹಣ ವರ್ಗಾವಣೆ ಬೇನಾಮಿ ಆಸ್ತಿ ಗಳಿಕೆ ಆರೋಪ ಹೊತ್ತು ಜಾರಿ ನಿರ್ದೇಶನಾಲಯ(ಇಡಿ) ಸುಳಿಯಿಂದ ನ್ಯಾಯಾಂಗ ಬಂಧನದಡಿ ತಿಹಾರ್ ಜೈಲ್ ಸೇರಿರುವ ಡಿಕೆಶಿ ಸಲ್ಲಿಸಿರುವ ಜಾಮೀನು ಅರ್ಜಿ ಇಂದು ವಿಚಾರಣೆ ಬರಲಿದೆ. ಬೆಳಗ್ಗೆ ದೆಹಲಿ ಹೈಕೋರ್ಟಿನ ನ್ಯಾ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ ಪೀಠ ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿತ್ತು. ಇಡಿ ವಿಶೇಷ ನ್ಯಾಯಾಲಯ ಜಾಮೀನು ರದ್ದು ಮಾಡಿದ್ದ ಆದೇಶ ಪ್ರಶ್ನಿಸಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ಆಲಿಸಲಿದೆ.
Advertisement
Advertisement
ಕಳೆದ ವಿಚಾರಣೆಯಲ್ಲಿ ಡಿಕೆಶಿ ಪ್ರಕರಣದ ಸಂಪೂರ್ಣ ತನಿಖಾ ಪ್ರಗತಿಯನ್ನು ಕೋರ್ಟಿಗೆ ಸಲ್ಲಿಸಬೇಕು ಅಂತ ನ್ಯಾಯಾಧೀಶರು ಇಡಿ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ, ತನಿಖೆ ಪ್ರಗತಿ ವರದಿಯನ್ನು ಕೋರ್ಟಿಗೆ ಇಡಿ ಅಧಿಕಾರಿಗಳು ಸಲ್ಲಿಸಲಿದ್ದಾರೆ. ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿರುವ ಡಿಕೆಶಿ ಪರ ವಕೀಲರು ಮೊದಲು ವಾದ ಮಂಡಿಸಲಿದ್ದಾರೆ.
Advertisement
ಡಿಕೆಶಿ ಪರ ವಕೀಲರ ವಾದ ಏನಿರಬಹುದು?
ಡಿಕೆಶಿ 28 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಲ್ಲದೆ ಜೈಲಿನಲ್ಲೂ 2 ದಿನ ವಿಚಾರಣೆಗೆ ಒಳಪಟ್ಟಿದ್ದಾರೆ. ಅನಾರೋಗ್ಯವಿದ್ದರೂ ತನಿಖೆಗೆ ಸಹಕರಿಸಿದ್ದಾರೆ. ಪ್ರಕರಣದ ಇತರೆ ಆರೋಪಿಗಳ ವಿಚಾರಣೆಯೂ ಅಂತ್ಯಕ್ಕೆ ಬಂದಿದೆ. ಹೀಗಾಗಿ, ಡಿಕೆಶಿ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇಡುವ ಅವಶ್ಯಕತೆ ಇಲ್ಲ ಎಂದು ಡಿಕಶಿ ಪರ ವಕೀಲರು ವಾದ ಮಂಡಿಸುವ ಸಾಧ್ಯತೆಗಳಿವೆ.
Advertisement
ಇಂದೇ ಇಡಿ ಪರ ವಕೀಲರು ವಾದ ಮಂಡಿಸುವ ಸಾಧ್ಯತೆ ಇದ್ದು ಹೆಚ್ಚುವರಿ ತನಿಖಾ ವರದಿಯನ್ನು ಹೈಕೋರ್ಟ್ ಮುಂದೆ ಇಡಲಿದ್ದು ಜಾಮೀನು ನೀಡದಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ಇಡಿ ಪರ ವಕೀಲರ ವಾದ ಏನಿರಬಹುದು..?
ಪ್ರಕರಣ ಸಂಬಂಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದ ಡಿ.ಕೆ ಸುರೇಶ್, ಡಿಕೆಶಿ ಆಪ್ತ ಸುನೀಲ್ ಕುಮಾರ್ ಶರ್ಮಾ, ಪುತ್ರಿ ಐಶ್ವರ್ಯ ವಿಚಾರಣೆ ನಡೆಸಲಾಗಿದೆ. ಮಾಜಿ ಶಾಸಕ ಕೆ.ಎನ್ ರಾಜಣ್ಣ ವಿಚಾರಣೆ ಬಾಕಿ ಇದೆ. ಸಾಕಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ಹೀಗಾಗಿ ಜಾಮೀನಿ ನೀಡಿದರೆ ಸಾಕ್ಷಿನಾಶ ಆಗಬಹುದು. ಹೀಗಾಗಿ ತನಿಖೆ ಮುಗಿಯೋವರೆಗೂ ಜಾಮೀನು ನೀಡಬೇಡಿ ಎಂದು ಇಡಿ ಪರ ವಕೀಲರು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ಡಿಕೆಶಿ ಪರ ಹಿರಿಯ ವಕೀಲರಾದ ಅಭಿಷೇಕ್ ಮನುಸಿಂಘ್ವಿ, ಮುಕುಲ್ ರೋಹಟಗಿ, ದಯಾನ್ ಕೃಷ್ಣನ್ ವಾದ ಮಂಡಿಸುವ ಸಾಧ್ಯತೆ ಇದ್ದು, ಜಾಮೀನು ಪಡೆಯಲು ದೊಡ್ಡ ವಕೀಲರ ಪಡೆಯನ್ನೇ ಡಿಕೆಶಿ ನೇಮಿಸಿಕೊಂಡಿದ್ದಾರೆ.